ಬಿಜೆಪಿಯ ಬಣಕಾರ್, ಜೆಡಿಎಸ್ ನ ಶ್ರೀನಿವಾಸ್, ನಿಂಗಪ್ಪ, ಮಲ್ಲಿಕಾರ್ಜುನ ಕಾಂಗ್ರೆಸ್ ಗೆ ಸೇರ್ಪಡೆ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಹಲವು ತಿಂಗಳು ಬಾಕಿ ಉಳಿದಿವೆ. ರಾಜ್ಯದಲ್ಲಿ ಪಕ್ಷಾಂತರ ಪರ್ವ ಬಿರುಸುಗೊಂಡಿದ್ದು,
ಹಿರೇಕೇರೂರು ಬಿಜೆಪಿ ಮಾಜಿ ಶಾಸಕ ಯು ಬಿ ಬಣಕಾರ್, ತುಮಕೂರು ಗ್ರಾಮಾಂತರ ಜೆಡಿಎಸ್ ಮಾಜಿ ಶಾಸಕ ಎಚ್ ನಿಂಗಪ್ಪ, ಬಿಜಾಪುರದ ಮಲ್ಲಿಕಾರ್ಜುನ ರೋಣಿ ಹಾಗೂ ಕೂಡ್ಲಗಿಯ ಜೆಡಿಎಸ್ ಮುಖಂಡ ಡಾ. ಎನ್ ಟಿ ಶ್ರೀನಿವಾಸ್ ತಮ್ಮ ಅಪಾರ ಬೆಂಬಲಿಗರೊಙದಿಗೆ ಇಂದು ಕಾಂಗ್ರೆಸ್ ಪಕ್ಷಕ್ಜೆ ಸೇರ್ಪಡೆಯಾದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಹಾಗೂ ಇತರ ನಾಯಕರು ಪಕ್ಷದ ಬಾವುಟ ನೀಡಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಸೇರುವವರ ದೊಡ್ಡ ಪಟ್ಟಿ ಇದೆ. ಇದನ್ನು ಒಂದೇ ಬಾರಿ ಬಿಡುಗಡೆ ಮಾಡುವುದಿಲ್ಲ. ಇಂದು ಶುಭ ಮುಹೂರ್ತ, ಶುಭ ಗಳಿಗೆಯಲ್ಲಿ ಬೇರೆ ಪಕ್ಷದ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದರು.
ಈ ನಾಯಕರೆಲ್ಲರೂ ಪಕ್ಷದ ಸಿದ್ಧಾಂತ ಒಪ್ಪಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವನ್ನು ಒಪ್ಪಿ, ಯಾವುದೇ ಷರತ್ತು ಇಲ್ಲದೇ ಪಕ್ಷ ಸೇರ್ಪಡೆಯಾಗಿದ್ದಾರೆ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಆಪರೇಶನ್ ಕಮಲ ಮೂಲಕ ಶಾಸಕರಿಗೆ ಕೋಟ್ಯಂತರ ರೂಪಾಯಿ ಕೊಟ್ಟು ಪಕ್ಷಕ್ಕೆ ಕರೆದುಕೊಂಡು ಅಧಿಕಾರ ಹಿಡಿದರು. ಮೂರು ವರ್ಷಗಳಿಂದ ಅಧಿಕಾರದಲ್ಲಿ ಇರುವ ಬಿಜೆಪಿ ಸರ್ಕಾರ ಲೂಟಿ ಹೊಡೆಯುವುದು ಸುಳ್ಳು ಹೇಳುವುದು ಇವರ ಸಾಧನೆ. ಈ ಸರ್ಕಾರವನ್ನು 40% ಸರ್ಕಾರ ಎಂದು ಹೆಸರು ಪಡೆದಿದೆ. ಹಣ ನೀಡದೆ ಈ ಸರ್ಕಾರದಲ್ಲಿ ಯಾವುದೇ ಕೆಲಸ, ನೇಮಕಾತಿ, ವರ್ಗಾವಣೆ ಆಗುವುದಿಲ್ಲ. ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಮಂತ್ರಿಗಳು ಲೂಟಿಗೆ ಇಳಿದಿದ್ದು, ರಾಜ್ಯ ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮತ್ತೊಂದೆಡೆ ದ್ವೇಷದ ರಾಜಕಾರಣ ಮಾಡಿ ಸಮಾಜದಲ್ಲಿ ಸಾಮರಸ್ಯ ನಾಶ ಮಾಡುತ್ತಿದ್ದಾರೆ. ಜನ ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯ ನಾಶವಾಗಲಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಸಿದ್ಧಾಂತ, ನಾಯಕತ್ವ ನಂಬಿ ಬಿಜೆಪಿ, ಜೆಡಿಎಸ್ ತೊರೆದು, ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ.
ಬಣಕಾರ್ ಅವರು ಬಿಜೆಪಿ ತೊರೆದು ಬೇಷರತ್ತಾಗಿ ಪಕ್ಷ ಸೇರುತ್ತಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಶುಭವಾಗಲಿ ಎಂದು ಹಾರೈಸಿದರು.