ಬಿಜೆಪಿಯೊಂದಿಗೆ ಮೈತ್ರಿ ಸಂದೇಶ ಬಯಲು

ಮುಂಬೈ,ಆ.೬- ಬಂಡಾಯ ನಾಯಕ ಏಕನಾಥ್ ಶಿಂಧೆ ಅವರನ್ನು ದೂರ ಇಟ್ಟರೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ದ ಎನ್ನುವ ಸಂದೇಶವನ್ನು ಶಿವಸೇನೆ ಅಧ್ಯಕ್ಷ ಉದ್ದವ್ ಠಾಕ್ರೆ ಬಣ ಸಂದೇಶ ರವಾನಿಸಿತ್ತು ಎನ್ನುವ ಸಂಗತಿ ಬಯಲಾಗಿದೆ.
ಮುಖ್ಯಮಂತ್ರಿ ಉದ್ದವ್ ಠಾಕ್ರೆ ವಿರುದ್ದ ಬಂಡಾಯ ಸಾರಿ ಕಳೆದ ಜೂನ್ ತಿಂಗಳಲ್ಲಿ ಅಸ್ಸಾಂ ನಲ್ಲಿ ಬೀಡುಬಿಟ್ಟಿದ್ದ ಶಿವಸೇನೆಯ ಏಕನಾಥ ಶಿಂಧೆ ನೇತೃತ್ವದ ಶಾಸಕರನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಈ ರೀತಿಯ ಸಂದೇಶವನ್ನು ಉದ್ದವ್ ಠಾಕ್ರೆ ಅವರು ಬಿಜೆಪಿ ನಾಯಕರಿಗೆ ರವಾನಿಸಿದ್ದರು ಎನ್ನಲಾಗಿದೆ.
ಈ ಕುರಿತು ಮುಖ್ಯಮಂತ್ರಿ ಏಕನಾಥ ಶಿಂಧೆ ಬಣದ ಶಿವಸೇನೆ ವಕ್ತಾರ ದೀಪಕ್ ಕೇಸರ್ಕರ್ ಮಾತನಾಡಿ ಈ ವಿಷಯ ತಿಳಿಸಿದ್ದಾರೆ.
ಬಂಡಾಯ ಸೇನಾ ಶಾಸಕರು ಜೂನ್‌ನಲ್ಲಿ ಗುವಾಹಟಿಯ ಹೋಟೆಲ್‌ನಲ್ಲಿ ಮೊಕ್ಕಾಂ ಹೂಡಿದ್ದಾಗ ಉದ್ಧವ್ ಠಾಕ್ರೆ ನೇತೃತ್ವದ ಸೇನೆಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಾಗಿತ್ತು. ಅಗ ಅವರು ಬಿಜೆಪಿನಾಯಕರಿಗೆ ವಿಧಿಸಿದ್ದ ಷರತ್ತು ಏಕನಾಥ ಶಿಂಧೆ ಅವರನ್ನು ದೂರ ಇಡುವುದಾಗಿತ್ತು ಎಂದು ತಿಳಿಸಿದ್ದಾರೆ.
ಬಿಜೆಪಿ ನಾಯಕರು ಏಕನಾಥ ಶಿಂಧೆ ಅವರಿಗೆ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಉದ್ದವ್ ಠಾಕ್ರೆ ಬಣದ ಷರತ್ತು ಒಪ್ಪಿಕೊಂಡಿರಲಿಲ್ಲ ಎಂದೂ ಅವರು ಹೇಳಿದ್ದಾರೆ.
ಬಿಜೆಪಿ ಮತ್ತು ಶಿವಸೇನೆಯ ಬಂಡಾಯ ಶಾಸಕರು ಸೇರಿ ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದ್ದಾರೆ.