ಬಿಜೆಪಿಯೇತರ ಸರ್ಕಾರದಲ್ಲಿ ರಾಜ್ಯಗಳು ದಿವಾಳಿ ಅಂಚಿಗೆ ತಲುಪಿವೆಃ ಆರ್.ಎಸ್. ಪಾಟೀಲ ಕುಚಬಾಳ

ವಿಜಯಪುರ, ಜು.20-ಬಿಜೆಪಿಯೇತರ ಆಳ್ವಿಕೆ ಇರುವ ಸರ್ಕಾರಗಳು ಕೇವಲ ಚುನಾವಣಾ ದೃಷ್ಟಿಕೋನವಿರಿಸಿ ಉಚಿತ ಯೋಜನೆಗಳ ದುಂಬಾಲು ಬಿದ್ದು ಆ ರಾಜ್ಯಗಳನ್ನು ದಿವಾಳಿ ಅಂಚಿಗೆ ತಲುಪಿಸುತ್ತಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ವಿಶ್ಲೇಷಿಸಿದರು.
ವಿಜಯಪುರದ ಮಹೇಶ್ವರಿ ಮಂಗಲ ಕಾರ್ಯಾಲಯದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿಜೆಪಿ ಜನಹಿತ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಗುರಿ ಹೊಂದಿದೆ, ಉಚಿತ ಯೋಜನೆ ಘೋಷಣೆ ಮಾಡಿ ಜನರ ಬಲವನ್ನು ಕುಂದಿಸುವ ಮನೋಭಾವ ಬಿಜೆಪಿಯಲ್ಲಿ ಇಲ್ಲ ಎಂದರು.
ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ತೆಲಂಗಾಣ ಹೀಗೆ ಬಿಜೆಪಿಯೇತರ ಆಳ್ವಿಕೆ ಇರುವ ಸರ್ಕಾರಗಳು ಲಕ್ಷಾಂತರ ಕೋಟಿ ರೂ. ಸಾಲದ ಹೊರೆ ಹೊರೆಸಿಕೊಂಡಿವೆ, ಚುನಾವಣೆ ದೃಷ್ಟಿಕೋನದಿಂದ ಜಾರಿಯಾಗುವ ಉಚಿತ ಭಾಗ್ಯಗಳು ಆ ರಾಜ್ಯಗಳನ್ನು ದಿವಾಳಿ ಅಂಚಿಗೆ ತಲುಪಿಸುತ್ತಿವೆ ಎಂದರು. ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರ ಉಚಿತಗಳ ಯೋಜನೆ ಬೆನ್ನು ಹತ್ತಿದ್ದು, ಆ ರಾಜ್ಯವನ್ನು ಆರ್ಥಿಕ ದಿವಾಳಿತನಕ್ಕೆ ತಲುಪಿಸಲು ದಾರಿಯಾಗಿದೆ ಎಂದು ಆರೋಪಿಸಿದರು.
ಶ್ರೀಲಂಕಾ ಮೊದಲಾದ ರಾಷ್ಟ್ರಗಳು ಆರ್ಥಿಕ ದಿವಾಳಿತನಕ್ಕೆ ತಲುಪಿವೆ, ಆದರೆ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಪ್ರಬಲವಾದ ಜಿಎಸ್‍ಟಿ ವ್ಯವಸ್ಥೆ ಭಾರತದ ಆರ್ಥಿಕತೆ ಸಶಕ್ತೀಕರಣವಾಗುತ್ತಾ ಸಾಗಿದೆ ಎಂದರು.
ಕೋವಿಡ್ ಪ್ರತಿಬಂಧಕ ಲಸಿಕೆ, ಜಿಎಸ್‍ಟಿ ಹೀಗೆ ಮೋದಿಜಿ ಅವರು ಏನೇ ಯೋಜನೆ ರೂಪಿಸಿದರೂ ಟೀಕೆ ಎನ್ನುವುದು ಪ್ರತಿಪಕ್ಷಗಳು ಸಿದ್ಧಪಡಿಸಿದ ಸಿದ್ಧಔಷಧ. ಪ್ರತಿಪಕ್ಷಗಳು ಹತಾಶೆಯಾಗಿ ಕೇವಲ ಟೀಕೆ ಮಾಡುತ್ತಾ ಕುಳಿತುಕೊಂಡಿವೆ ಎಂದು ದೂರಿದರು.
ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿ:
ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಬೇಕು, ನಿಗಮ ಮಂಡಳಿ, ಸ್ಥಳೀಯ ಸಂಸ್ಥೆಗಳಿಗೆ ನಾಮನಿರ್ದೇಶನ ಮಾಡುವ ಅವಕಾಶ ಸೃಜನೆಯಾಗದೇ ಅನೇಕ ಅವಕಾಶಗಳಿಂದ ಕಾರ್ಯಕರ್ತರು ವಂಚಿತರಾಗುವಂತಾಯಿತು, ಆದರೂ ಸಹ ನಮ್ಮ ಕಾರ್ಯಕರ್ತ ಬಂಧುಗಳು ಪಕ್ಷದ ನಿಷ್ಠೆಯನ್ನು ಕಿಂಚಿತ್ತೂ ಕಡಿಮೆ ಮಾಡಿಲ್ಲ, ಇದು ಬಿಜೆಪಿಯ ಕಾರ್ಯಕರ್ತರ ಶಕ್ತಿ, ಬಿಜೆಪಿ ಹಿರಿಯ ನಾಯಕರು ಕಾರ್ಯಕರ್ತರಿಗೆ ಯಾವ ಅವಕಾಶಗಳು ವಂಚಿತವಾಗದಂತೆ ನೋಡಿಕೊಂಡು ಅವರ ಶ್ರಮಕ್ಕೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು, ಮುಂಬರುವ ಸ್ಥಳೀಯ ಸಂಸ್ಥೆ, ಜಿ.ಪಂ, ತಾ.ಪಂ. ಚುನಾವಣೆಗಳನ್ನು ಎದುರಿಸಲು ಬಿಜೆಪಿ ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದರು.
ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಬಿಜೆಪಿ ಪ್ರಮುಖರಾದ ಶಿವರುದ್ರ ಬಾಗಲಕೋಟ, ವಿವೇಕಾನಂದ ಡಬ್ಬಿ, ಮಲ್ಲಮ್ಮ ಜೋಗೂರ, ದಯಾಸಾಗರ ಪಾಟೀಲ, ಡಾ.ಸುರೇಶ ಬಿರಾದಾರ, ಬಸವರಾಜ ಹೂಗಾರ, ಕಾಸುಗೌಡ ಬಿರಾದಾರ ಮೊದಲಾದವರು ಉಪಸ್ಥಿತರಿದ್ದರು.