ಬಿಜೆಪಿಯಿಂದ 1.5 ಲಕ್ಷ ಕೋಟಿ ಲೂಟಿ:ಪ್ರಿಯಾಂಕ ಆರೋಪ

ಟೀ.ನರಸೀಪುರ, ಏ.25- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ 1.5 ಲಕ್ಷ ಕೋಟಿ ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯವನ್ನು ಅಭವೃದ್ಧಿ ಪಥದತ್ತ ಕೊಂಡೊಯ್ಯವುದಾಗಿ ಭರವಸೆ ನೀಡಿದರು.
ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಲ್ಲೆ ಪ್ರಿಯಾಂಕ ಗಾಂಧಿ ಇಂದು ರಾಜ್ಯದಲ್ಲಿ ಮತಬೇಟೆ ನಡೆಸಿದರು.
ಮೈಸೂರಿನ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ ಹೆಳವರಹುಂಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಸ್ವಜನ ಪಕ್ಷಪಾತ, ದುರಾಡಳಿತದ ಸರ್ಕಾರ ವಾಗಿದೆ.ಶಾಸಕರೊಬ್ಬರ ಪುತ್ರ ನಿಂದ 8 ಕೋಟಿ ರೂ ವಶಪಡಿಸಿಕೊಳ್ಳಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಕರ್ನಾಟಕದ ‘ನಂದಿನಿ’ ಬ್ರಾಂಡ್ ನ್ನು ಕಾಂಗ್ರೆಸ್ ಬಲಪಡಿಸುತ್ತದೆ ಮತ್ತು ಹೊರಗಿನಿಂದ ಯಾವುದೇ ಸಹಕಾರಿ ಬರುವುದಿಲ್ಲ ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ, ಶಾಸಕ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ವೇಳೆ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಹನೂರಿನ ಹೊಸಪೋಡಿನ ಗಿರಿಜನ ಮಹಿಳೆಯನ್ನು ತಬ್ಬಿಕೊಂಡು ಮಾತನಾಡಿದರು.
ಇದರಿಂದ ಹರ್ಷಗೊಂಡ ಮಹಿಳೆ, ನಾನು ಪ್ರಿಯಾಂಕಾ ಗಾಂಧಿಯಲ್ಲಿ ಇಂದಿರಾ ಗಾಂಧಿ ನೋಡಿದ್ದೇನೆ. ನಮಗೆ ಶಾಲೆ, ರಸ್ತೆ ಮೂಲಭೂತ ಸೌಕರ್ಯ‌ ಕೊರತೆ ಇದೆ ಎಂದು ಕೇಳಿಕೊಂಡೆ. ಎಲ್ಲ ಕೆಲಸವನ್ನು ಮಾಡಿಕೊಡುತ್ತೇವೆ ಎಂದು ಹೇಳಿದರು. ಇಂದಿರಾ ಗಾಂಧಿ ನಮಗೆ ಜಮೀನನ್ನು ಕೊಡಿಸಿದ್ದರು. ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದೆವು. ಇದೀಗ ಅದು ತಪ್ಪಿದ್ದಂತಾಗಿದೆ ಎಂದು ಹೇಳಿದರು.