ಬಿಜೆಪಿಯಿಂದ ಸೇವಾ ಹೀ ಸಂಘಟನ್ ಅಭಿಯಾನ

ದಾವಣಗೆರೆ.ಮೇ.೨೯; ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರವು ಮೇ 30 ರಂದು 7 ವರ್ಷದ ಆಡಳಿತ ಪೂರೈಸಲಿರುವ ಹಿನ್ನೆಲೆಯಲ್ಲಿ  ರಾಜ್ಯದ 50 ಸಾವಿರ ಬೂತ್‌ಗಳಲ್ಲಿ “ ಸೇವಾ ಹೀ ಸಂಘಟನ್ ” ಅಡಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೇಶ್ ಹನಗವಾಡಿ ಹೇಳಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಬಿಜೆಪಿ ಪಕ್ಷದಿಂದ ಜಿಲ್ಲೆಯ ೨ ಸಾವಿರ ಬೂತ್ ಗಳಲ್ಲಿ ಈಗಾಗಲೇ ವರ್ಚುವಲ್ ಸಭೆ ನಡೆಸಿ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದೇವೆ.ಸಹಾಯವಾಣಿಯ ಮೂಲಕ ನೊಂದವರಿಗೆ ನೆರವು ನೀಡಲಾಗುತ್ತಿದೆ.ಲಾಕ್ ಡೌನ್ ನಿಂದ ಆರ್ಥಿಕವಾಗಿ ನೊಂದವರಿಗೆ ಸಹಾಯ ಹೀಗೆ ಜನರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.ಮೇ.೩೦ ರಂದು ಪ್ರಧಾನಿ ಮೋದಿಯವರು ಎರಡನೇ ಬಾರಿಗೆ ಆಡಳಿತ ಕೈಗೊಂಡು ಎರಡು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಸ್ಕ್ ವಿತರಣೆ,ವೃದ್ದರು,ಸಂತ್ರಸ್ತರಿಗೆ ಉಟೋಪಚಾರ,ರಕ್ತದಾನ ಶಿಬಿರ ನಡೆಸಲಾಗುವುದು ಇದಲ್ಲದೇ ಬೂತ್ ನ 8ರಿಂದ 10 ಕಾರ್ಯಕರ್ತರಿಂದ ಹಣ ಸಂಗ್ರಹಿಸಿ ತುರ್ತು ಅಗತ್ಯವಿರುವವರಿಗೆ ನೆರವು ನೀಡಲಾಗುವುದು ಈ ಜವಾಬ್ದಾರಿಯನ್ನು ಬೂತ್ ಮಟ್ಟದ ಅಧ್ಯಕ್ಷರಿಗೆ ವಹಿಸಲಾಗಿದೆ ಎಂದರು.ಸಂಸದರು , ಶಾಸಕರು , ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಸೋಂಕಿತರ ಕುಟುಂಬಗಳಿಗೆ ಔಷಧಿ , ಆಹಾರ ಕಿತ್ ಹಂಚಿಕೆ , ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿ , ಮೊಬೈಲ್ ರಿಚಾರ್ಜ್ , ಆಂಬುಲೆನ್ಸ್ ಸೇವೆ ಒದಗಿಸುವುದು , ಅಂತ್ಯಸಂಸ್ಕಾರಕ್ಕೆ ನೆರವು ಇತ್ಯಾದಿ ಸೇವೆಗಳನ್ನು ಕೈಗೊಂಡಿದ್ದಾರೆ ಹಾಗೂ ಮುಂದೆಯೂ ನೆರವಾಗಲಿದ್ದಾರೆ.ಕೊವಿಡ್ ನಿರ್ವಹಣೆಗೆ ಕೇಂದ್ರ ಹಾಗೂ ರಾಜ್ಯ ನಿರಂತರ ಸಹಕಾರ ನೀಡುತ್ತಿದೆ.ದೇಶದ ೨೦ ಕೊಟಿ ಜನರಿಗೆ ಲಸಿಕೆ ನೀಡಲಾಗಿದೆ.ರಾಜ್ಯದ ಜನತೆಗೆ ಮುಂದಿನ ದಿನಗಳಲ್ಲಿ ಸಂಪೂರ್ಣ ಲಸಿಕೆ ಹಂತಹಂತವಾಗಿ ದೊರೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಿ.ಎಸ್ ಜಗದೀಶ್,ಡಿ.ಎಸ್ ಶಿವಶಂಕರ್,ಶ್ರೀನಿವಾಸ್ ದಾಸಕರಿಯಪ್ಪ,ವಿಶ್ವಾಸ್ ಇದ್ದರು.