ಬಿಜೆಪಿಯಿಂದ ಸರ್ವಾಧಿಕಾರದ ಧೋರಣೆ:ಜೆ.ಆರ್.ಲೋಬೋ

ಮಂಗಳೂರು, ಎ.೨- ಸರ್ವಾಧಿಕಾರ ಧೋರಣೆಯಿಂದಲೇ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷವು ಕಾಂಗ್ರೆಸ್‌ನಿಂದ ಸೂಚಿಸಲಾದ ವಿಪಕ್ಷ ನಾಯಕನ ಆಯ್ಕೆಗೆ ಮಾನ್ಯತೆ ನೀಡದೆ ಕಾಂಗ್ರೆಸ್ ಪಕ್ಷಕ್ಕೆ ಅಗೌರವ ತೋರಿದೆ ಎಂದು ಜೆ.ಆರ್. ಲೋಬೋ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಈ ನಡೆಯನ್ನು ಪ್ರತಿಭಟಿಸುವುದಾಗಿ ಹೇಳಿದರು. ಮನಪಾದಲ್ಲಿ ಹೆಚ್ಚು ಅವಧಿಗೆ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷವು, ಬಿಜೆಪಿಗೆ ಕೇವಲ ಆರು ಸ್ಥಾನಗಳಿದ್ದಾಗಲೂ ವಿಪಕ್ಷದ ಅಧ್ಯಕ್ಷನ ಸ್ಥಾನಮಾನ ನೀಡಿದೆ. ಆಡಳಿತದ ಜತೆಗೆ ಪ್ರತಿಪಕ್ಷವು ಸಕಾರಾತ್ಮಕವಾಗಿ ಸಹಕಾರ ನೀಡುತ್ತಾ, ಆಡಳಿತದ ಲೋಪಗಳನ್ನು ಎತ್ತಿ ಹಿಡಿದಾಗ ಮಾತ್ರವೇ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದರೆ ಇದೀಗ ಮನಪಾದಲ್ಲಿ ಬಿಜೆಪಿ ಆಡಳಿತದ ಭ್ರಷ್ಟಾಚಾರವನ್ನು ಬಹಿರಂಗಪಡಿಸುವ ಭಯದಿಂದಲೇ ಕಾಂಗ್ರೆಸ್ ಪಕ್ಷದಿಂದ ವಿಪಕ್ಷ ನಾಯಕನಾಗಿ ವಿನಯ್‌ರಾಜ್‌ರವರನ್ನು ಆಯ್ಕೆ ಮಾಡಿರುವುದಕ್ಕೆ ಮಾನ್ಯತೆ ನೀಡಿಲ್ಲ ಎಂದರು. ಸ್ಮಾರ್ಟ್ ಸಿಟಿ ಮಂಡಳಿಗೆ ಹಿಂದೆ ಮೇಯರ್‌ಗೆ ಕಾಂಗ್ರೆಸ್ ಪಕ್ಷದಿಂದ ವಿನಯ್‌ರಾಜ್ ಅವರನ್ನು ಆಯ್ಕೆ ಮಾಡಿ ಸೂಚಿಸಿದಾಗಲೂ ನಿರಾಕರಿಸಲಾಗಿತ್ತು. ತಮ್ಮ ಇಚ್ಚೆಯಂತೆ ಭಾಸ್ಕರ ಮೊಯ್ಲಿಯನ್ನು ಆಯ್ಕೆ ಮಾಡಿತ್ತು. ಆದರೆ ಅವರು ಅದನ್ನು ಸ್ವೀಕರಿಸಿಲ್ಲ. ಈವರೆಗೆ ಯಾವುದೇ ಸಭೆಗೂ ಹಾಜರಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಕಾನೂನು ರೀತಿಯಲ್ಲಿ ಆಯುಕ್ತರಿಗೆ ಪಕ್ಷದ ಜಿಲ್ಲಾಧ್ಯಕ್ಷರು ವಿಪಕ್ಷ ನಾಯಕನ ಆಯ್ಕೆಗೆ ಮಾನ್ಯತೆ ನೀಡಲು ಪತ್ರ ಮೂಲಕ ಕೋರಿಕೊಂಡಿದ್ದರು.
ಮೇಯರ್ ತಮ್ಮ ವಿವೇಚನೆ ಉಪಯೋಗಿಸಿ ನಿರ್ಧಾರ ಕೈಗೊಳ್ಳುವ ಬದಲು ರಾಷ್ಟ್ರೀಯ ಪಕ್ಷಕ್ಕೆ ಅಗೌರವ ತೋರಿದ್ದಾರೆ ಎಂದರು. ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ರಾಜಕೀಯದಲ್ಲಿ ಯಾರೂ ಶಾಶ್ವತ ಅಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಮನಪಾದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದ ಸಂದರ್ಭ ಬಿಜೆಪಿಗೆ ಎರಡಂಕಿಯ ಸದಸ್ಯರು ಇಲ್ಲದ ವೇಳೆ ವಿಪಕ್ಷ ನಾಯಕನ ಸ್ಥಾನ ಮಾನ ನೀಡಲಾಗಿದೆ. ಅದನ್ನು ಮರೆಯಬಾರದು ಎಂದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಜಿಲ್ಲಾ ಕಾಂಗ್ರೆಸ್ ಸೂಚಿಸಿದ ವಿಪಕ್ಷ ನಾಯಕನನ್ನು ತಿರಸ್ಕರಿಸುವ ಬಿಜೆಪಿಯ ವಿರುದ್ಧ ನಾವು ಜನರ ಮುಂದೆ ಹೋಗುವ ಅಥವಾ ನಮ್ಮ ಸದಸ್ಯರು ಸಾಮೂಹಿಕ ರಾಜೀನಾಮೆಗೆ ಮುಂದಾಗುವ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದರು ಮಧ್ಯಸ್ಥಿತಿಕೆ ವಹಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ರೀತಿಯ ನೀಚ ರಾಜಕಾರಣವನ್ನು ನಾವೆಂದೂ ಕೇಳಿಲ್ಲ, ನೋಡಿಲ್ಲ. ಬಿಜೆಪಿ ಆಡಳಿತದಲ್ಲಿ ಅವ್ಯವಹಾರ, ಭ್ರಷ್ಟಾಚಾರ ಆಗಿರುವ ಅನುಮಾನಕ್ಕೆ ಇದು ಕಾರಣವಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ವಿನಯ್‌ರಾಜ್, ಪ್ರವೀಣ್ ಚಂದ್ರ ಆಳ್ವ, ವಿಶ್ವಾಸ್ ಕುಮಾರ್ ದಾಸ್, ಅನಿಲ್ ಕುಮಾರ್, ಪ್ರಕಾಶ್ ಸಾಲ್ಯಾನಂ, ಲಾರೆನ್ಸ್ ಡಿಸೋಜಾ, ಸಂತೋಷ್ ಕುಮಾರ್ ಉಪಸ್ಥಿತರಿದ್ದರು.