ಬಿಜೆಪಿಯಿಂದ ಸರ್ಕಾರಿ ಆಡಳಿತಯಂತ್ರದ ದುರುಪಯೋಗ: ರೈ


ಮಂಗಳೂರು, ನ.೧೮- ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತರು ಬಿಎಲ್‌ಒಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಶಾಸಕರ ಮನೆಯಲ್ಲಿ ಅಂಗನವಾಡಿ ಕಾರ್ಯಕರ್ತರನ್ನು ಸನ್ಮಾನಿಸುವ ಮೂಲಕ ಪ್ರಭಾವ ಬೀರುವ ಕೆಲಸ ಮಾಡಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಿನ್ನೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಹತ್ತಿರುವಾಗುತ್ತಿರುವಂತೆಯೇ ಬಿಜೆಪಿಯು ಬಿಎಲ್‌ಒಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರನ್ನು ಉಪಯೋಗಿಸಿಕೊಂಡು ಸರಕಾರಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಕೊರೋನ ಸಂದರ್ಭ ಉತ್ತಮ ಕೆಲಸ ಮಾಡಿದ್ದಕ್ಕಾಗಿ ಸನ್ಮಾನ ಎಂದು ಹೇಳಿಕೊಂಡಿದ್ದಾರೆ. ಆದರೆ ಇದು ಚುನಾವಣೆ ಹತ್ತಿರ ಬರುತ್ತಿರುವಾಗ ಇಂತಹ ಕಾರ್ಯ ಸರಕಾರಿ ಆಡಳಿತ ಯಂತ್ರದ ದುರುಪಯೋಗ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಬಂದಾಗ ಎಲ್ಲಾ ಪಂಚಾಯತ್ ಸದಸ್ಯರು, ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಬರುವಂತೆ ಅಧಿಕಾರಿಗಳ ಮೂಲಕ ತಾಕೀತು ಮಾಡಲಾಗಿತ್ತು ಎಂದು ಅವರು ಆಕ್ಷೇಪಿಸಿದರು. ಅಂಗನವಾಡಿಯೊಂದರಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದ ಅಕ್ಕಿಯಲ್ಲಿ ಹುಳಗಳಿರುವ ಬಗ್ಗೆ ನಾವು ಭೇಟಿ ನೀಡಿದ್ದ ಸಂದರ್ಭ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿತ್ತು. ಆದರೆ ಇದಕ್ಕಾಗಿ ಅಂಗನವಾಡಿ ಕಾರ್ಯಕರ್ತರನ್ನು ಕರೆಸಿ ಪಂಚಾಯತ್ ಸದಸ್ಯರು ತರಾಟೆಗೈದಿರುವ ಪ್ರಕರಣ ನಡೆದಿದೆ. ಹಿರಿಯ ಅಧಿಕಾರಿಗಳ ಬದಲಿಗೆ ಸದಸ್ಯರು ಈ ರೀತಿಯ ದಬ್ಬಾಳಿಕೆ ನಡೆಸಿರುವುದು ಖಂಡನೀಯ ಎಂದು ಅವರು ಹೇಳಿದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರಕಾರದಿಂದ ನೇಮಕವಾಗಿದ್ದ ಆರೋಗ್ಯ ಮಿತ್ರರನ್ನು ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಆಗಿದೆ ಎಂದು ಹೇಳಿ ನೋಂದಾಯಿತ ಖಾಸಗಿ ಆಸ್ಪತ್ರೆಯ ಉಸ್ತುವಾರಿ ನೋಡುವಂತೆ ಆದೇಶ ಮಾಡಲಾಗಿದೆ. ಇದು ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಮೂಲಭೂತ ಸೌಕರ್ಯಗಳ ಕೊರತೆಯಿಂದ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸಿಕೊಂಡಿದ್ದಾರೆಂಬುದನ್ನು ಸರಕಾರ ಪರೋಕ್ಷವಾಗಿ ಬಿಂಬಿಸಿದೆ. ಈ ಪ್ರಕ್ರಿಯೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಹರಿನಾಥ್, ಶಶಿಧರ ಹೆಗ್ಡೆ, ಶಾಲೆಟ್ ಪಿಂಟೋ, ಲುಕ್ಮಾನ್ ಬಂಟ್ವಾಳ, ಶಾಹುಲ್ ಹಮೀದ್, ಬೇಬಿ ಕುಂದರ್, ಸಲೀಂ, ಸುಧೀರ್, ಉಮೇಶ್ ದಂಡೆಕೇರಿ, ಪದ್ಮಶೇಖರ್ ಜೈನ್, ಎಂ.ಎಸ್. ಮುಹಮ್ಮದ್, ಅಬ್ಬಾಸ್ ಅಲಿ, ಸುಭಾಶ್ಚಂದ್ರ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಅಪ್ಪಿ, ರಮಾನಾಂದ ಪೂಜಾರಿ, ನೀರಜ್‌ಪಾಲ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.