ಬಿಜೆಪಿಯಿಂದ ರೈತರಿಗೆ ನೆಮ್ಮದಿ

ಬಂಟ್ವಾಳ,ನ.೧೦-ಕಳೆದ ೭೦ ವರ್ಷಗಳಿಂದ ದೇಶವನ್ನಾಳಿದ ಯಾವುದೇ ಸರಕಾರಗಳು ರೈತರಿಗೆ ಬೇಕಾದ ಯೋಜನೆಗಳನ್ನ ಜಾರಿ ಮಾಡದೇ ಶೋಷಿಸಿ ರೈತರನ್ನು ಬೀದಿ ಪಾಲು ಮಾಡಿದ್ದು, ಆದರೆ ಕಳೆದ ೬ ವರ್ಷಗಳಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ವಿಶೇಷ ಯೋಜನೆಯನ್ನು ಜಾರಿ ಮಾಡಿದ್ದು, ರೈತರು ನೆಮ್ಮದಿಯಿಂದ ಬದುಕುವ ವ್ಯವಸ್ಥೆ ನಿರ್ಮಾಣವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿ ಹೇಳಿದ್ದಾರೆ.
ಬಿ.ಸಿ.ರೋಡಿನ ಪಕ್ಷದ ಕಚೇರಿಯಲ್ಲಿ ಬಂಟ್ವಾಳ ಬಿಜೆಪಿ ಮಂಡಲ ರೈತ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಂದಲೇ ಇಡೀ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತುಂಗ ದಲ್ಲಿರುತ್ತದೆ. ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿಯಿಂದಾಗಿ ರೈತರಿಗೂ ತುಂಬಾ ಅನುಕೂಲವಾಗಿದೆ. ಒಟ್ಟಾರೆ ದೇಶದಲ್ಲಿನ ರೈತರ ಉತ್ಪಾದನೆಯನ್ನು ದ್ವಿಗುಣ ಗೊಳಿಸುವ ಉದ್ದೇಶದಿಂದ ಮೋದಿ ಸರ್ಕಾರ ಯೋಜನೆ ಜಾರಿಗೆ ತಂದಿದೆ ಎಂದರು.
ಬಲಿಷ್ಠ ನಾಯಕತ್ವದಿಂದ ದೇಶ ಹಾಗೂ ವಿದೇಶದಲ್ಲಿ ಭಾರತೀಯರಿಗೆ ಗೌರವ ಸಿಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡುವ ಕಾರ್ಯ ರೈತ ಮೋರ್ಚಾದಿಂದ ಆಗಬೇಕು. ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಲ್ಲಾ ಪಂಚಾಯತ್‌ನ್ನು ಗೆಲ್ಲಿಸುವ ನಿಟ್ಟಿನಲ್ಲಿ ರೈತ ಮೋರ್ಚಾ ನಿರ್ಣಾಯಕ ಪಾತ್ರ ವಹಿಸಬೇಕು ಎಂದು ಅವರು ತಿಳಿಸಿದರು.
ಕ್ಷೇತ್ರದ ಅಧ್ಯಕ್ಷ ದೇವಪ್ಪ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ, ರೈತ ಮೋರ್ಚಾದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಪ್ರ. ಕಾರ್ಯದರ್ಶಿಗಳಾದ ಶಿವಪ್ಪ ಗೌಡ, ಹರೀಶ್ ಬೇಡಗುಡ್ಡೆ, ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಅಣ್ಣಳಿಕೆ, ರಾಘವೇಂದ್ರ ಭಟ್, ಉಪಾಧ್ಯಕ್ಷರಾದ ವಿಜಯ ರೈ, ಕಾರ್ಯದರ್ಶಿಗಳಾದ ಸಂಜೀವ ಪೂಜಾರಿ, ಪುರುಷೋತ್ತಮ ಮಜಲು, ರೈತ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.