ಬಿಜೆಪಿಯಿಂದ ರಾಜ್ಯದ ಮಾನ ಹರಾಜು

ಬೆಂಗಳೂರು, ಮಾ. ೨೮- ಸಿಡಿ ಪ್ರಕರಣದಿಂದ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಆಗುತ್ತಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ಪೊಲೀಸರ ವೈಫಲ್ಯವೇ ಕಾರಣ ಎಂದು ದೂರಿರುವ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಸಿಡಿ ಮಾಧ್ಯಮದಲ್ಲಿ ಕಾಣಿಸಿಕೊಂಡು ೨೬ ದಿನಗಳಾದರೂ ಸಂತ್ರಸ್ತೆ ಯುವತಿಯನ್ನು ಪೊಲೀಸರಿಗೆ ಪತ್ತೆ ಹಚ್ಚಲಿಕ್ಕೆ ಆಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸಿದ್ಧರಾಮಯ್ಯ ಅವರು, ಸಿಡಿಯಲ್ಲಿರುವ ಯುವತಿ ಅಜ್ಞಾತ ಸ್ಥಳದಿಂದ ನಿರಂತರವಾಗಿ ತನ್ನ ಹೇಳಿಕೆಗಳ ಸಿಡಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದ್ದಾಳೆ. ತನ್ನ ವಕೀಲನ ಮೂಲಕ ಪೊಲೀಸರಿಗೆ ದೂರು ಕಳುಹಿಸಿಕೊಡುತ್ತಿದ್ದಾಳೆ. ತಂದೆ-ತಾಯಿ ಜತೆ ಮಾತನಾಡುತ್ತಿದ್ದಾಳೆ. ಹೀಗಿದ್ದರೂ ಪೊಲೀಸರ ಕೈಗೆ ಮಾತ್ರ ಸಿಗುತ್ತಿಲ್ಲ ಎಂದರೆ ಏನರ್ಥ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಯುವತಿಯದ್ದು ಎಂದು ಹೇಳಲಾದ ವರದಿಗಳನ್ನು ಗಮನಿಸಿದರೆ ಆಕೆಗೆ ರಾಜ್ಯ ಸರ್ಕಾರದ ಮೇಲಾಗಲಿ, ಪೊಲೀಸರ ಮೇಲಾಗಲಿ ನಂಬಿಕೆ ಇಲ್ಲ ಎಂದು ಗೊತ್ತಾಗುತ್ತದೆ. ಪೊಲೀಸರು ತನ್ನ ವಿರುದ್ಧವೇ ಸಂಚು ಮಾಡುತ್ತಿದ್ದಾರೆ ಎಂಬ ಅರ್ಥದಲ್ಲಿ ಯುವತಿ ಮಾತನಾಡುತ್ತಿದ್ದಾಳೆ. ಗೃಹ ಸಚಿವ ಬಸವರಾಜಬೊಮ್ಮಾಯಿ ಅವರು ಈ ಬಗ್ಗೆ ಗಮನ ಹರಿಸಬೇಕು ಎಂದು ಸಿದ್ಧರಾಮಯ್ಯ ಟ್ವೀಟರ್‌ನಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯದ ಪೊಲೀಸ್ ಇಲಾಖೆ ಸೇರಿದಂತೆ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದಕ್ಕೆ ಈ ಸಿಡಿ ಹಗರಣ ಸಾಕ್ಷಿ. ಸಾಮಾನ್ಯ ಕುಟುಂಬದಿಂದ ಬಂದಿರುವ ಯುವತಿಯನ್ನು ಇಷ್ಟು ದಿನಗಳ ನಂತರವೂ ಪತ್ತೆ ಹಚ್ಚಲಾಗಲಿಲ್ಲವೆಂದರೆ ಏನು ಅರ್ಥ. ಆಕೆ ಏನೂ ವಿಜಯಮಲ್ಯನೋ ಇಲ್ಲವೋ ನೀರವ್ ಮೋದಿಯೋ ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ.
ದಿನಕ್ಕೊಂದು ತಿರುವು ಪಡೆದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ಸಿಡಿ ಹಗರಣ ತನಿಖೆ ತಾರ್ಕಿಕ ಅಂತ್ಯ ಕಾಣಬೇಕಾದರೆ ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದ ಹೊರ ಬಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕು. ಕಾನೂನುಬದ್ಧವಾದ ಅವಳ ಹಕ್ಕನ್ನು ಚಲಾಯಿಸದಂತೆ ತಡೆ ಹಿಡಿಯುತ್ತಿರುವವರು ಯಾರು ಎಂದು ಸಿದ್ಧರಾಮಯ್ಯ ಟ್ವೀಟ್‌ನಲ್ಲಿ ಪ್ರಶ್ನೆ ಹಾಕಿದ್ದಾರೆ.