
ಜೇವರ್ಗಿ:ಮಾ.27: ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಸಂವಿಧಾನ ಕೊಟ್ಟಿರುವ ಹಕ್ಕನ್ನು ಕೇಂದ್ರ ಸರ್ಕಾರ ಯಾವುದೇ ನಾಚಿಕೆ ಇಲ್ಲದೆ ಕಸಿದುಕೊಳ್ಳುತ್ತಿದೆ. ದೆಹಲಿ ಭೂಪ್ರದೇಶ(ತಿದ್ದುಪಡಿ) ಕಾಯ್ದೆ ತರುವ ಮೂಲಕ ಬ್ರಿಟಿಷರ ಕಾಲದ ವೈಸ್ರಾಯ್ ಪದ್ಧತಿ ಮರು ಜಾರಿಗೆ ಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ತಾಲ್ಲೂಕು ಸಂಚಾಲಕ ಈರಣ್ಣಗೌಡ ಪಾಟೀಲ ಗುಳ್ಯಾಳ ಕಿಡಿಕಾರಿದ್ದಾರೆ.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಚುನಾಯಿತ ಸರ್ಕಾರಕ್ಕಿಂತಲೂ ಕೇಂದ್ರದ ಕೈಗೊಂಬೆಯಂತಿರುವ ಲೆಫ್ಟಿನೆಂಟ್ ಜನರಲ್ಗೆ ಈ ಮಸೂದೆಯು ಹೆಚ್ಚು ಅಧಿಕಾರ ನೀಡುತ್ತದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಿಜೆಪಿಯು ಈ ಮೂಲಕ ದ್ವೇಷ ಸಾಧನೆಗೆ ಇಳಿದಿದೆ. ದೆಹಲಿ ನಾಗರಿಕರಿಗೆ ಮಾಡಿದ ಅವಮಾನ ಅಷ್ಟೇ ಅಲ್ಲ ನಮ್ಮ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದರು.
ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಣ ಜಟಾಪಟಿ ಬಗ್ಗೆ ಸುಪ್ರೀಂಕೋರ್ಟ್ನ ಸಂವಿಧಾನ ಪೀಠ ತೀರ್ಪು ನೀಡಿದ ಮೂರು ವರ್ಷಗಳ ನಂತರ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು. ಬಿಜೆಪಿಯ ದ್ವೇಷ ಸಾಧನೆಗೆ ಇದೊಂದು ನಿದರ್ಶನವಷ್ಟೇ. ಆಮ್ ಆದ್ಮಿ ಪಕ್ಷದ ದೇಶಭಕ್ತಿ ಮಾದರಿಗೆ ಹೆದರಿ ಕಪಟವೇಷಧಾರಿ ದೇಶಭಕ್ತ ಬಿಜೆಪಿ ಇಂತಹ ನೀಚ ಕೆಲಸಕ್ಕೆ ಇಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.