ಬಿಜೆಪಿಯಿಂದ ಪಾಠ ಅಗತ್ಯವಿಲ್ಲ: ಹರಿಪ್ರಸಾದ

ಹುಬ್ಬಳ್ಳಿ, ಡಿ 24: ಬಿಜೆಪಿಯವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಕಿಡಿ ಕಾರಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಾಪಸ್ ವಿಚಾರವಾಗಿ ಬಿಜೆಪಿಯವರಿಂದ ವಿರೋಧ ವ್ಯಕ್ತವಾದ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ ಮೇಲಿನಂತೆ ನುಡಿದರು.

ಬಿಜೆಪಿಯವರು ಮೊದಲು ರೈತರು, ಹೆಣ್ಣುಮಕ್ಕಳ ಮೇಲಿನ ಶೋಷಣೆ ಕುರಿತು ವಿಚಾರ ಮಾಡಲಿ ಎಂದ ಅವರು ಸಂವಿಧಾನದ ಹಕ್ಕುಗಳನ್ನು ನಾವು ರಕ್ಷಣೆ ಮಾಡುತ್ತೇವೆ ಎಂದರು.

ಕಾಂಗ್ರೆಸ್ ತುಷ್ಟಿಕರಣ ಮಾಡುತ್ತಿಲ್ಲ. ಬಹು ಸಂಖ್ಯಾತರ ತುಷ್ಟೀಕರಣ ಮಾಡುತ್ತಿರುವುದು ಬಿಜೆಪಿ. ಹಿಂಸೆ, ಸುಳ್ಳನ್ನು ಪ್ರಚಾರ ಮಾಡುತ್ತಿರುವುದು ಬಿಜೆಪಿ ಎಂದು ಹರಿಹಾಯ್ದರು.

ಬಿಜೆಪಿಯವರು ಗೋಡ್ಸೆ ಅನುಯಾಯಿಗಳು ಅವರಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹಿಜಾಬ್ ಮತ್ತು ಬುರ್ಖಾ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಹಿಜಾಬ್ ಎಂಬುದು ತಲೆ ಮತ್ತು ಎದೆ ಮುಚ್ಚಿಕೊಳ್ಳೋಕೆ ಇರೋದು. ಈಗಾಗಲೇ ಕೆಲವು ಶಾಲಾ-ಕಾಲೇಜುಗಳಲ್ಲಿ ಇದೆ. ಬುರ್ಖಾ ಅನ್ನೊದು ಸಂಪೂರ್ಣ ದೇಹ ಮುಚ್ಚಿಕೊಳ್ಳುವುದು. ಶಾಲಾ ಕಂಪೌಂಡ್‍ವರೆಗೂ ಬುರ್ಖಾ ಆ ನಂತರ ಹಿಜಾಬ್ ಇರಬೇಕು ಅನ್ನುವ ನನ್ನ ಕಲ್ಪನೆಯಾಗಿದೆ ಎಂದರು.

ನಾವು ಟಿಪ್ಪು ಸುಲ್ತಾನ್ ಪಾರ್ಟಿ ಅಲ್ಲ. ನಾವು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದವರ ಪರ. ನಮಗೆ ಟಿಪ್ಪು ಸುಲ್ತಾನ್ ಪರ ಎನ್ನುವವರು ಬ್ರಿಟೀಷರ ಬೂಟು ನೆಕ್ಕುತ್ತಿದ್ದವರು ಎಂದು ಅವರು ಕಿಡಿಕಾರಿದರು.

ರಾಜಕಾರಣದಲ್ಲಿ ಯಾರನ್ನೂ ತುಳಿಯಲು ಆಗದು ಎಂದು ಹರಿಪ್ರಸಾದ ಗುಡುಗಿದರು. ತುಳಿಯುತ್ತೇನೆ ಎನ್ನುವವರು ಭ್ರಮನಿರಸನವಾಗುತ್ತಾರೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಅವರು ಹೇಳಿದರು.
ತಾವೂ ಲೋಕಸಭಾ ಚುನಾವಣೆಗೆ ಟಿಕೇಟ್ ಆಕಾಂಕ್ಷಿ ಎಂದು ಹರಿಪ್ರಸಾದ ತಿಳಿಸಿದರು.