ಬಿಜೆಪಿಯಿಂದ ಜನಹಿತ ಕಡೆಗಣನೆ


ಗದಗ, ಡಿ 7: ಕಳೆದ ಮೂರು ವರ್ಷದಿಂದ ಬಿಜೆಪಿ ಸರ್ಕಾರ ಗ್ರಾಮೀಣ ಪ್ರದೇಶದ ಜನರಿಗೆ ಒಂದೇ ಒಂದು ಮನೆಯನ್ನು ನೀಡಿಲ್ಲ. ಬಿಜೆಪಿ ಸರ್ಕಾರ ಜೀವಂತವಾಗಿಲ್ಲ, 18 ತಿಂಗಳಿಂದ ಗ್ರಾಪಂ ಸಿಬ್ಬಂದಿ ವೇತನ ಹಾಗೂ ಒಂದು ವರ್ಷದಿಂದ ಗ್ರಾಪಂ ಸದಸ್ಯರ ಗೌರವ ಧನ ಸಹ ನೀಡಿಲ್ಲ. ಆದ್ದರಿಂದ, ಜಿಪಂ ಹಾಗೂ ತಾಪಂ ಚುನಾವಣೆ ಎದುರಿಸಲು ಸಾಧ್ಯವಾಗದೇ ಚುನಾವಣಾ ಆಯೋಗ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಚುನಾವಣೆಯಿಂದ ಪಲಾಯನ ಮಾಡುತ್ತಿದೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಹೇಳಿದರು.
ಧಾರವಾಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಮುಂಡರಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಅವರು ಮಾತನಾಡಿದರು.
ಬ್ಲಾಕ್‍ನಿಂದ ರಾಷ್ಟ್ರ ಮಟ್ಟದ ರಾಜಕಾರಣದ ಅನುಭವದೊಂದಿಗೆ ಮಾಜಿ ಪ್ರಧಾನಿಗಳ ಜೊತೆಗೆ ಕೆಲಸ ಮಾಡಿದ ಹೆಮ್ಮೆ ನನಗಿದೆ. ಕಳೆದ 25 ವರ್ಷಗಳಿಂದ ಹಾವೇರಿ ಜಿಲ್ಲೆಯ ಜನರ ಸೇವೆಯನ್ನು ಮಾಡುತ್ತಿದ್ದೇನೆ. 2 ಬಾರಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದೇನೆ. ಸುಳ್ಳು ಹೇಳುವ ಬಿಜೆಪಿ ಸರ್ಕಾರದಿಂದ ಬೇಸತ್ತ ಜನ ಬದಲಾವಣೆ ಬಯಸಿದ್ದಾರೆ. ಹಾನಗಲ್ ಚುನಾವಣೆ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ನೀವು ತಲೆ ತಗ್ಗಿಸುವ ಕಾರ್ಯ ಎಂದಿಗೂ ಮಾಡುವುದಿಲ್ಲ. ಆದ್ದರಿಂದ, ಈ ಬಾರಿ ಹೆಚ್ಚಿನ ಪ್ರಥಮ ಪ್ರಾಶಸ್ತ್ಯದ ಮತನೀಡಿ ನನ್ನನ್ನು ಗೆಲ್ಲಿಸಬೇಕು ಎಂದು ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್.ಕೆ ಪಾಟೀಲ್, ಡಿಸಿಸಿ ಅಧ್ಯಕ್ಷರಾದ ಜಿ ಎಸ್ ಪಾಟೀಲ್ ,ಜಿ.ಎಸ್ ಗಡ್ಡದೇವಮಠ್,ಡಿ ಆರ್ ಪಾಟೀಲ್,ಎಲ್ ನಾಡಗೌಡ, ನಾಗರಾಜ್ ಛಬ್ಬಿ, ಶಿವಕುಮಾರ್ ಪಾಟೀಲ್, ವೈ.ಎನ್ ಗೌಡರ್, ಕರಡಗಿ ಸುಜಾತ ದೊಡ್ಡಮನಿ, ಭರತ್ ಪಿ ನಾಯಕ್ , ಎಸ್.ಡಿ ಮಕಂದರ್, ನೀಲಮ್ಮ, ಜ್ಯೋತಿ ರಾಘವೇಂದ್ರ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು , ವಿವಿಧ ಘಟಕಗಳ ಪದಾಧಿಕಾರಿಗಳು , ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.