ಬಿಜೆಪಿಯಿಂದ ಗೊಂದಲಮಯ ಹೇಳಿಕೆ : ಮಾಜಿ ಕಾರ್ಪೋರೇಟರ್ ಆಸೀಫ್ ಮಸೂದ್ ಆರೋಪ

ಶಿವಮೊಗ್ಗ, ಮೇ 31: ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಘೋಷಿಸಿದ ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ಕಾಲಮಿತಿಯೊಳಗೆ ಜಾರಿಗೊಳಿಸಲಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಲ್ಲ ಅಗತ್ಯ ಕ್ರಮಕೈಗೊಂಡಿದೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಆಸೀಫ್ ಮಸೂದ್ ತಿಳಿಸಿದ್ದಾರೆ. ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಪರಾಭವಗೊಂಡಿರುವ ಬಿಜೆಪಿ ಪಕ್ಷವು, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಅನುಷ್ಠಾನದ ಕುರಿತಂತೆ ಗೊಂದಲಮಯ ಹೇಳಿಕೆ ನೀಡುತ್ತಿದೆ. ಇದು ಬಿಜೆಪಿ ಪಕ್ಷದ ಹತಾಶ ಮನಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯಲಿದೆ. ರಾಜ್ಯದ ಜನತೆಗೆ ನೀಡಿದ್ದ ಭರವಸೆಯಂತೆ ನಡೆದುಕೊಳ್ಳಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ಜಾರಿಗೊಳಿಸಿದ ಕಾರ್ಯಕ್ರಮಗಳೇ ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ವಿದೇಶಗಳಲ್ಲಿನ ಕಪ್ಪು ಹಣವನ್ನು ದೇಶಕ್ಕೆ ತಂದು ಪ್ರತಿಯೋರ್ವರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ನೀಡಿದ್ದ ಭರವಸೆಯನ್ನು ಬಿಜೆಪಿ ಪಕ್ಷ ಇಲ್ಲಿಯವರೆಗೂ ಏಕೆ ಕಾರ್ಯಗತಗೊಳಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.