
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೧೦:ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪೇಸಿಎಂ ಅಭಿಯಾನ ಮಾಡಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು, ಈಗ ಬಿಜೆಪಿ ಸುದ್ದಿಗೆ ಗ್ರಾಸವಾಗಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ಭ್ರಷ್ಟಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡುಪೇಸಿಎಸ್ ಅಭಿಯಾನದ ಮೂಲಕ ಕಾಂಗ್ರೆಸ್‌ಗೆತಿರುಗೇಟು ನೀಡಿದೆ.
ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿರುವ ವಿಚಾರ ವಿವಾದಕ್ಕೆ ಒಳಗಾಗಿ ಪತ್ರ ನಕಲಿ ಎಂದು ಚೆಲುವರಾಯಸ್ವಾಮಿಅವರು ಸ್ಪಷ್ಟಪಡಿಸಿ, ಈ ಪತ್ರದ ಹಿಂದೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಇದ್ದಾರೆ ಎಂದು ಆರೋಪಿಸಿದ್ದರು. ಈ ಪತ್ರದ ಸತ್ಯಾಸತ್ಯತೆ ಬಗ್ಗೆ ಸಿಐಡಿ ತನಿಖೆ ನಡೆದಿರುವಾಗಲೇ ಬಿಜೆಪಿ ಪೇಸಿಎಸ್ ಅಭಿಯಾನಕ್ಕೆ ಮುಂದಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪೇಸಿಎಸ್ ಅಭಿಯಾನವನ್ನು ನಡೆಸಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರವನ್ನು ಇಕ್ಕಿಟ್ಟಿಗೆಸಿಲುಕಿಸುವ ಪ್ರಯತ್ನವನ್ನು ಈ ಅಭಿಯಾನವ ಮೂಲಕ ನಡೆಸಿದೆ.ಸಾಮಾಜಿಕ ಜಾಲತಾಣದಲ್ಲಿ ಕ್ಯೂಆರ್ ಕೋಡ್ ಬಳಕೆ ಮಾಡಿಕೊಂಡು ಪೇಸಿಎಸ್ ಮಾಡಿ ೬ ರಿಂದ ೮ ಲಕ್ಷ ರೂ.ನ್ನು ಇಲ್ಲಿ ಪಡೆಯಲಾಗುತ್ತದೆ ಎಂದು ಶೀರ್ಷಿಕೆ ಹಾಕಿ ಜತೆಗೆ ಟ್ಯಾಗ್ ಲೈನ್‌ನಲ್ಲಿ ಸ್ಕ್ಯಾನ್ ಮಾಡಿ ಚೆಲುವರಾಯಸ್ವಾಮಿ ಅವರ ಭ್ರಷ್ಟಾಚಾರ ಬಹಿರಂಗವಾಗುತ್ತದೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಿದೆ.
ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಮಂತ್ರಿಯಾದಾಗಿನಿಂದಲೂ ಒಂದಲ್ಲಾ ಒಂದು ಸುದ್ದಿಯಾಗುತ್ತಿದ್ದು, ಜೆಡಿಎಸ್‌ನ ಕುಮಾರಸ್ವಾಮಿ ಅವರು ಕೃಷಿ ಇಲಾಖೆಯಲ್ಲಿ ವರ್ಗಾವಣೆಗೆ ನಿಗದಿಯಾಗಿರುವ ದರ ಇಟ್ಟುಕೊಂಡು ಅವರ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೂ ಮೊದಲು ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ಸಂಸ್ಥೆಯ ನಿರ್ವಾಹಕ ಜಗದೀಶ್ ಪ್ರಕರಣದಲ್ಲೂ ಚೆಲುವರಾಯಸ್ವಾಮಿ ಅವರು ವಿವಾದಕ್ಕೆ ಸಿಲುಕಿದ್ದರು. ಇದೆಲ್ಲದರ ಪ್ರಕರಣದಲ್ಲೂ ಕ್ಲೀನ್ ಚಿಟ್ ಪಡೆದುಕೊಂಡಿದ್ದ ಚೆಲುವರಾಯಸ್ವಾಮಿಈಗ ಕೃಷಿ ಅಧಿಕಾರಿಗಳಿಂದ ಲಂಚ ಕೇಳಿದ್ದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು, ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ಬೆನ್ನಿಗೆ ಕಾಂಗ್ರೆಸ್ ಪಕ್ಷ ನಿಂತಿದ್ದರೆ, ವಿಪಕ್ಷಗಳು ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ವಾಕ್ಸಮರ ನಡೆಸಿವೆ.