ಸಂಜೆವಾಣಿ ವಾರ್ತೆ
ಕೊಟ್ಟೂರು. ಜು.23: ಬಿಜೆಪಿ ಪಕ್ಷವು ಕಪ್ಪು ಹಣ ವಾಪಸ್ ತಂದು ಬಡವರ ಖಾತೆಗೆ ಹಣ ಪಾವತಿಸುವುದಾಗಿ ಹೇಳಿದ್ದು ಇಲ್ಲಿಯವರೆಗೆ ಯಾವುದೇ ಕಾರ್ಯ ರೂಪಕ್ಕೆ ತಂದಿಲ್ಲ, ಬೆಲೆಗಳನ್ನು ನಿಯಂತ್ರಣ ಮಾಡುತ್ತೇವೆ ಎಂದು ಹೇಳಿದ್ದು ಸಹ ಜಾರಿಗೆ ತಂದಿಲ್ಲ ಇಂತಹ ಬಿಜೆಪಿಯಷ್ಟು ವಚನ ಭ್ರಷ್ಟರು ದೇಶದಲ್ಲಿ ಯಾರೂ ಇಲ್ಲ ಎಂದು ಮಾಜಿ ಸಂಸದ ಉಗ್ರಪ್ಪ ಕಿಡಿಕಾರಿದರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರವು ರಾಜಕೀಯ ಸೇಡನ್ನು ತೀರಿಸುವ ಉದ್ದೇಶದಿಂದಾಗಿ ಕರ್ನಾಟಕಕ್ಕೆ ಎಫ್‌ಸಿಐ ನಲ್ಲಿ ಸಾಕಷ್ಟು ಅಕ್ಕಿ ಇದ್ದರೂ ಸಹ ಅಕ್ಕಿ ನೀಡುತ್ತಿಲ್ಲ, ಕೇಂದ್ರವು ಅಕ್ಕಿಯನ್ನು ಮುಕ್ತ ಮಾರುಕಟ್ಟೆಗೆ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಮುಕ್ತ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ ಎಂದು ಹೇಳಿದರು.
ನಮ್ಮ ಸರ್ಕಾರವು ಈಗಾಗಲೇ ಗ್ಯಾರಂಟಿ ಕಾರ್ಡುಗಳಲ್ಲಿದ್ದ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದಿದ್ದು, ಈಗ ಕೇವಲ ಪದವಿ ಮತ್ತು ಡಿಪ್ಲೋಮಾ ಮುಗಿಸಿದವರಿಗೆ ರೂ.3000 ಮತ್ತು 1500 ಕೊಡುವುದು ಉಳಿದಿದೆ ಈ ಯೋಜನೆಯನ್ನು ಶೀಘ್ರದಲ್ಲಿ ಜಾರಿಗೆ ತರುತ್ತೇವೆ ನಾವು ಕೊಟ್ಟ ವಚನ ಉಳಿಸಿಕೊಂಡಿದ್ದೇವೆ ಎಂದರು.
ಬಿಜೆಪಿ ಪಕ್ಷವು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನಕ್ಕೆ, ವಿಧಾನ ಮಂಡಲಕ್ಕೆ ಅಪಪ್ರಚಾರ ಎಸಗಿದ್ದು ಖಂಡನೀಯ ಅವರು ಹತಾಶರಾಗಿ ಈ ರೀತಿಯಾಗಿ ಮಾಡುತ್ತಿದ್ದಾರೆ, ರಾಜಕೀಯ ಮತ್ತು ಸೈದ್ಧಾಂತಿಕವಾಗಿ ಬಿಜೆಪಿ ಪಕ್ಷವು ದಿವಾಳಿ ತನಕ್ಕೆ ಹೋಗಿದೆ, ಮೀನನ್ನು ನೀರಿನಿಂದ ಹೊರ ಹಾಕಿದಾಗ ಹೇಗೆ ಒದ್ದಾಡುತ್ತದೆಯೋ ಅದೇ ರೀತಿಯಾಗಿ ಅಧಿಕಾರದಿಂದ ಹೊರ ಬಂದ ವ್ಯಕ್ತಿಗಳು ಒದ್ದಾಡುವಂತಾಗಿದೆ ಎಂದು ವ್ಯಂಗ್ಯವಾಡಿದರು ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ಶಾಲೆಯ ಪ್ರಮುಖ ಆರ್ ಎಸ್ ಎಸ್ ನವರಿಗೆ ತೃಪ್ತಿ ಮಾಡುವ ಉದ್ದೇಶದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಗೆ ಪಾಟಲಿಗೆ ಮಾಡುವ ಸ್ಥಿತಿ ಬಿಜೆಪಿ ಬಂದಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಮೊನ್ನೆ ನಡೆದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷದ ಸಭೆಯನ್ನು ಉದ್ದೇಶಿಸಿ ಭ್ರಷ್ಟರು ಎಂದು ಹೇಳಿದ್ದು ಪ್ರಧಾನಿ ಹುದ್ದೆಗೆ ಶೋಭೆ ತರುವಂತದ್ದಲ್ಲ ಇದು ಖಂಡನೀಯ, ಭ್ರಷ್ಟರಾಗಿದ್ದಾರೆ ಅವರ ಮೇಲೆ ಕೇಸು ದಾಖಲಿಸಿ ತನಿಖೆಗೆ ಒಳಪಡಿಸಿ ಎಂದು ಹೇಳಿದರು.
ಪ್ರಧಾನಮಂತ್ರಿಯವರು ಎಷ್ಟು ವಿಚಲಾಗಿದ್ದಾರೆ ಎಂಬುದು ಈ ಹೇಳಿಕೆಯಿಂದ ಗೊತ್ತಾಗುತ್ತಿದೆ ಭ್ರಷ್ಟಾಚಾರ ಇದ್ದರೆ ಸಾಕ್ಷಿ ಸಮೇತ ರಾಷ್ಟ್ರದ ಜನರ ಮುಂದೆ ಇಡಬೇಕು ಕೇವಲ ರಾಜಕೀಯಗೋಸ್ಕರ ಹಲವು ರೀತಿಯಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು
ಪ್ರಧಾನಮಂತ್ರಿಯವರು ರಾಫೆಲ್ ಹಗರಣದ ಬಗ್ಗೆ ಪಾರ್ಲಿಮೆಂಟಿಗೆ ತನಿಖೆಗೆ ಏಕೆ ಒಳಪಡಿಸಲಿಲ್ಲ, ಪ್ರಧಾನಮಂತ್ರಿ ಕಚೇರಿಯ ಹಣ ಎಷ್ಟು ಕೋಟಿ ಇದೆ ಎಂಬುದು ಮಾಹಿತಿ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರ ದಿಂದ ಕೂಡಿದೆ. ಬಿಜೆಪಿ ಜನರನ್ನು ದಾರಿ ತಪ್ಪಿಸುವ ಮಾತುಗಳನ್ನು ಹಾಡುತ್ತಿದ್ದಾರೆ ಹೊರತು, ಭ್ರಷ್ಟರನ್ನು ತಡೆಯುವ ಮತ್ತು ದೇಶದ ಅಭಿವೃದ್ದಿ, ಸಾಮರಸ್ಯ ಕಾಪಾಡುವ, ದೇಶದ ರಕ್ಷಣೆಯನ್ನು ಮಾಡುವ ಶಕ್ತಿ ಅವರಿಂದ ಆಗುತ್ತಿಲ್ಲ ಎಂದು ಹೇಳಿದರು. ಮಣಿಪುರದಲ್ಲಿ ನಡೆದ ಮೀಸಲಾತಿಗೋಸ್ಕರ 150ಕ್ಕೂ ಹೆಚ್ಚು ಜನ ಸಾವು ಮತ್ತು ಬೆತ್ತಲೆಯ ಮೆರವಣಿಗೆ ಇಡೀ ದೇಶವೇ ತಲೆತಗ್ಗಿಸುವಂತಹ ಘಟನೆ ಇದರ ಬಗ್ಗೆ ಮೋದಿಯವರು ಏಕೆ ಮಾತನಾಡಲಿಲ್ಲ ಹಾಗೂ ಮಣಿಪುರಕ್ಕೆ ಹೋಗಲಿಲ್ಲ, ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರ ಮಾತನಾಡುತ್ತಿದ್ದಾರೆ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 28 ಸಾರಿ ಕರ್ನಾಟಕಕ್ಕೆ ಬಂದು ಹೋಗುತ್ತಾರೆ ತಾವು ರಾಮನ ಭಕ್ತರಾಗಿದ್ದರೆ ಮಣಿಪುರದಲ್ಲಿ ನಡೆಯುವ ಘಟನೆಗಳನ್ನು ಆಗದಂತೆ ನೋಡಿಕೊಳ್ಳಿ, ಹಾಗೂ ಕಾನೂನು ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ಅಲ್ಲಿನ ಸಾವಿಗೆ ನೇರವಾಗಿ ಪ್ರಧಾನಿಯವರೇ ಕಾರಣವಾಗಬೇಕು, ಪ್ರಧಾನಿ ರಾಮನ ಭಕ್ತರಾಗಿದ್ದರೆ ಅಲ್ಲಿನ ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ತಮಗೆ ಹೆಣ್ಣಿನ ಬೆಲೆ, ಹೆಣ್ಣಿನ ರಕ್ಷಣೆ, ಪ್ರಾಣದ ಬೆಲೆ ಏನಾದರೂ ಗೊತ್ತಿದೆಯೇ ಎಂದು ಪ್ರಶ್ನಿಸಿದರು. ಬಿಜೆಪಿ ಪಕ್ಷವು ಸಮಾಜದ ಸಾಮರಸ್ಯ ಕಾಪಾಡುವಲ್ಲಿ ಜನತೆಯ ರಕ್ಷಣೆ ನೀಡುವಲ್ಲಿ ಆರ್ಥಿಕ ಅಭಿವೃದ್ಧಿ ಉಳಿಸುವಲ್ಲಿ ವಿಫಲವಾಗಿದೆ. ಪುಲ್ವಾಮಾ ದಾಳಿಯ ಬಗ್ಗೆ ಜನರನ್ನು ತಪ್ಪು ದಾರಿಗೆ ಎಳೆದಿದ್ದರು, ಅಲ್ಲಿನ ರಾಜ್ಯಪಾಲರು ನಡೆದ ಘಟನೆ ಬಗ್ಗೆ ಜನರ ಮುಂದೆ ಇಟ್ಟಿದ್ದಾರೆ, ಕೇವಲ ಜನರನ್ನು ತಪ್ಪು ದಾರಿಗೆ ತರುವಂತ ಕೆಲಸ ಬಿಜೆಪಿ ಮಾಡುತ್ತಿದೆ ಹಾಗಾಗಿ ರಾಜ್ಯದಲ್ಲಿ ಜನರು ತಕ್ಕ ಪಾಠ ನೀಡಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ದ್ವಾರಕೀಶ್, ಕೆಪಿಸಿಸಿ ಸದಸ್ಯ ಗೂಳಿ ಮಲ್ಲಿಕಾರ್ಜುನ್, ಅಡಿಕೆ ಮಂಜುನಾಥ್, ಮಾಜಿ ಜಿಲ್ಲಾ ಉಪಾಧ್ಯಕ್ಷರಾದ ದೊಡ್ಡರಾಮಣ್ಣ, ಶ್ರೀನಿವಾಸ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.