ಬಿಜೆಪಿಯಲ್ಲೇ ಕುಟುಂಬ ರಾಜಕಾರಣ: ಎಚ್‌ಡಿಕೆ ತಿರುಗೇಟು

ಬೆಂಗಳೂರು, ನ. ೧೪- ಜೆಡಿಎಸ್ ಪಕ್ಷದ್ದು ಕುಟುಂಬ ರಾಜಕಾರಣ ಎಂಬ ಬಿಜೆಪಿ ಟೀಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕುಟುಂಬ ರಾಜಕಾರಣದ ರಂಬೆ-ಕೊಂಬೆಗಳು ಸಮೃದ್ಧವಾಗಿರುವುದು ಎಲ್ಲಿ, ಯಾವ ಪಕ್ಷದಲ್ಲಿ, ಕುಟುಂಬ ರಾಜಕಾರಣದ ವಿರಾಟ ದರ್ಶನ ಆಗುತ್ತಿರುವುದು ಬಿಜೆಪಿಯಲ್ಲೇ ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರ ನಿರ್ಮಾಣ ಬಿಜೆಪಿಯ ಗುರಿಯಲ್ಲ. ಆಪರೇಷನ್ ಕಮಲ ಅದರ ಗರಿ. ಆಪರೇಷನ್ ಕಮಲವನ್ನು ರಾಷ್ಟ್ರೀಕರಣ ಮಾಡಿ ರಾಷ್ಟ್ರಪ್ರೇಮ ಮೆರೆದ ಕುಖ್ಯಾತಿ ಬಿಜೆಪಿಯದ್ದು. ಒಡಕು ರಾಜಕಾರಣ ಬಿಜೆಪಿಯ ನಿತ್ಯ ಕಾಯಕ. ಆಪರೇಷನ್ ಕಮಲ ಅದರ ಅಧಿಕೃತ ರಾಜಧರ್ಮ. ಕುಟುಂಬ ರಾಜಕಾರಣ ಅದರ ಅಧಿಕಾರದ ಸೋಪಾನ ಎಂದು ಟ್ವಿಟ್ಟರ್‌ನಲ್ಲಿ ಹರಿಹಾಯ್ದಿದ್ದಾರೆ.
ಬಿಜೆಪಿ ಸವಕಲು ಹೇಳಿಕೆಗಳಿಂದ ಬೇಳೆ ಬೇಯಿಸಿಕೊಳ್ಳುವುದನ್ನು ಬಿಟ್ಟು ಜನರ ಕೆಲಸ ಮಾಡಲಿ. ಬೇರೆಯವರ ತಟ್ಟೆಯತ್ತ ನೋಡುವ ಚಾಳಿ ಬಿಟ್ಟರೆ ಉತ್ತಮ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಿಜೆಪಿಯಲ್ಲಿನ ಕುಟುಂಬ ರಾಜಕಾರಣ ಎಲ್ಲ ಪಕ್ಷಗಳ ದಾಖಲೆಗಳನ್ನು ಸರಿಗಟ್ಟಿದೆ. ಕರ್ನಾಟಕದ ಮಟ್ಟಿಗಂತೂ ಕುಟುಂಬ ರಾಜಕಾರಣದಲ್ಲಿ ಕೇಸರಿ ಕಲಿಗಳದ್ದು ಸಾರ್ವಕಾಲಿಕ ದಾಖಲೆ. ಕುಟುಂಬ ರಾಜಕಾರಣದ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಯಡಿಯೂರಪ್ಪನವರ ಕುಟುಂಬ, ಹಿರಿಯ ಮಗ ಲೋಕಸಭಾ ಸದಸ್ಯ, ಕಿರಿಯ ಮಗ ಉಪಾಧ್ಯಕ್ಷ. ಬಳ್ಳಾರಿಯ ರೆಡ್ಡಿ ಕುಟುಂಬ ” ಕರುಣಾಕರರೆಡ್ಡಿ ಶಾಸಕ, ಅವರ ಸಹೋದರ ಸೋಮಶೇಖರರೆಡ್ಡಿ ಕೂಡಾ ಶಾಸಕ. ಇನ್ನೊಬ್ಬ ಸಹೋದರ ಸಹ ಮಾಜಿ ಸಚಿವ, ಬಿಜೆಪಿ ನಾಯಕ. ಅವರ ಗೆಳೆಯರ ಶ್ರೀರಾಮುಲು ಈಗ ಮಂತ್ರಿ. ಶ್ರೀರಾಮುಲು ತಂಗಿ ಶಾಂತ ಮಾಜಿ ಸಂಸದೆ. ಮಾಜಿ ಸಂಸದ ಸಣ್ಣ ಪಕೀರಪ್ಪ ಕೂಡಾ ಶ್ರೀರಾಮುಲು ಸಂಬಂಧಿ”ಯೇ ಎಂದು ಟ್ವೀಟ್‌ನಲ್ಲಿ ತಿರುಗೇಟು ನೀಡಿದ್ದಾರೆ.
ಇನ್ನು ಜಾರಕಿಗಹೊಳಿ ಕುಟುಂಬದಲ್ಲಿ ರಮೇಶ್ ಜಾರಕಿಹೊಳಿ ಮಾಜಿ ಮಂತ್ರಿ. ಅವರ ಸಹೋದರ ಶಾಸಕ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷ ಎಂದಿರುವ ಕುಮಾರಸ್ವಾಮಿ, ಲಿಂಬಾವಳಿ ಕುಟುಂಬದಲ್ಲಿ ಅರವಿಂದ ಲಿಂಬಾವಳಿ ಶಾಸಕರು, ಅವರ ಭಾಮೈದ ರಘು ಕೂಡಾ ಶಾಸಕರು. ಉದಾಸಿ ಕುಟುಂಬದಲ್ಲಿ ದಿ. ಉದಾಸಿಯವರು ಮಂತ್ರಿಗಳಾಗಿದ್ದರು. ಅವರ ಮಗ ಶಿವಕುಮಾರ ಉದಾಸಿ ಈಗ ಸಂಸತ್ ಸದಸ್ಯ. ಪಟ್ಟಿ ಇನ್ನೂ ಇದೆ. ಬರೆಯುತ್ತಾ ಹೋದರೆ ಪುಟಗಳೇ ಸಾಲುವುದಿಲ್ಲ ಎಂದು ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿ ಹೇಳುವುದೊಂದು, ಮಾಡುವುದು ಇನ್ನೊಂದು. ಮನೆಯಲ್ಲಿ ಒಂದು ಮುಖ, ಬೀದಿಯಲ್ಲಿ ಇನ್ನೊಂದು ಮುಖ. ಒಡಕು ರಾಜಕಾರಣದ ಪಕ್ಷಕ್ಕೆ ಹೊಲಸು ರಾಜಕಾರಣದಲ್ಲೇ ಹೆಚ್ಚು ನಂಬಿಕೆ ಎನ್ನುವುದು ಆಪರೇಷನ್ ಕಮಲದ ಮೂಲಕ ರಚನೆ ಮಾಡಿದ ಸರ್ಕಾರಗಳೇ ಸಾಕ್ಷಿ ಎಂದು ಕುಮಾರಸ್ವಾಮಿ ಟ್ವಿಟ್ಟರ್‌ನಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.