ಬಿಜೆಪಿಯಲ್ಲೀಗ ಕದನ ವಿರಾಮ

ಬೆಂಗಳೂರು,ಮೇ ೨೮- ನಾಯಕತ್ವ ಬದಲಾವಣೆ ಚರ್ಚೆಗೆ ಇದು ಕಾಲವಲ್ಲ, ಈ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡ ಕೂಡದು, ದೆಹಲಿಗೆ ಬರುವುದು ಬೇಡ ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ತಾಕೀತು ಮಾಡಿರುವ ಬೆನ್ನಲ್ಲೆ ರಾಜ್ಯ ಬಿಜೆಪಿಯಲ್ಲಿ ಸದ್ಯಕ್ಕೆ ಕದನ ವಿರಾಮದ ಪರಿಸ್ಥಿತಿ ಇದೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆಗೆ ಸಂಬಂಧಿಸಿದಂತೆ ಸಚಿವ ಯೋಗೇಶ್ವರ್ ಸೇರಿದಂತೆ ಕೆಲ ಶಾಸಕರು ನಡೆಸಿರುವ ಪ್ರಯತ್ನ ಅದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಅವರ ಆಪ್ತ ಬಣದ ಸಚಿವರು, ಶಾಸಕರುಗಳು ನಡೆಸಿರುವ ಚಟುವಟಿಕೆಗಳು, ಎಲ್ಲವೂ ಹೈಕಮಾಂಡ್‌ನ ಎಚ್ಚರಿಕೆ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ತಣ್ಣಗಾದಂತೆ ಕಂಡು ಬಂದರೂ ಬಿಜೆಪಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ನಾಯಕತ್ವ ಬದಲಾವಣೆಗೆ ಪ್ರಯತ್ನ ನಡೆಸಿದ್ದವರ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ನಿನ್ನೆ ಗರಂ ಆಗಿ ಯಾರೋ ಎಲ್ಲೋ ಹೋಗುತ್ತಾರೆ ಎಂದರೆ ನಾನು ತಲೆ ಕೆಡಿಸಿಕೊಳ್ಳಲ್ಲ. ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ, ಕೊರೊನಾ ನಿಗ್ರಹ ನನ್ನ ಆಧ್ಯತೆ ಎಂದು ಗುಡುಗಿದ ಬೆನ್ನಲ್ಲೆ ಸಚಿವ ಯೋಗೇಶ್ವರ್ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಉದ್ದೇಶ ನನಗಿಲ್ಲ. ಅವರನ್ನು ಬದಲಾಯಿಸುವಷ್ಟು ಶಕ್ತಿಯೂ ತಮಗಿಲ್ಲ ಎಂದು ದೆಹಲಿ ಭೇಟಿ ಬಗ್ಗೆ ಸಮಜಾಯಿಷಿ ನೀಡಿ ವಿಜಯೇಂದ್ರ ಅವರ ಹಸ್ತಕ್ಷೇಪದ ಬಗ್ಗೆ ಕಿಡಿ ಕಾರಿದ್ದರು. ಇದು ನಿನ್ನೆ ಬಿಜೆಪಿಯಲ್ಲಿ ಭಿನ್ನಮತ ಭುಗಿಲೇಳಲು ಕಾರಣವಾಗಿ ಯಡಿಯೂರಪ್ಪ ಆಪ್ತ ಶಾಸಕರು ಯೋಗೇಶ್ವರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದ ಬಿಜೆಪಿ ವರಿಷ್ಠರು ಕೊರೊನಾ ಸಂದರ್ಭದಲ್ಲಿ ಈ ರೀತಿಯ ರಾಜಕೀಯ ಚಟುವಟಿಕೆಗಳು ಬೇಡ. ಇದರಿಂದ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಹಾನಿಯಾಘುತ್ತದೆ ಎಂಬ ಸಂದೇಶ ರವಾನಿಸಿ ನಯಕತ್ವ ಬದಲಾಔಣೆ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡ ಕೂಡದು ಎಂದು ತಾಕೀತು ಮಾಡಿದ್ದರು.
ವರಿಷ್ಠರ ಕಟ್ಟಪ್ಪಣೆ ಹಿನ್ನೆಲೆಯಲ್ಲಿ ರಾಜ್ಯ ನಾಯಕರುಗಳ ಬಾಯಿಗೆ ಬೀಗ ಬಿದ್ದಿದ್ದು, ಇಂದು ಯಾರೂ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಚಕಾರ ಎತ್ತಿಲ್ಲ. ಸದ್ಯಕ್ಕೆ ಬಿಜೆಪಿಯಲ್ಲಿ ಕದನ ವಿರಾಮ ವಾತಾವರಣ ಮೂಡಿದೆ.
ಮುಂದೆ ಯಾವಾಗ ಬೇಕಾದರೂ ನಾಯಕತ್ವ ಬದಲಾವಣೆ ವಿಚಾರ ಸ್ಫೋಟವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.