
ಬೆಂಗಳೂರು, ಏ. ೧೭- ಬಿಜೆಪಿಯಲ್ಲಿ ಲಿಂಗಾಯತ ಸಮುದಾಯಕ್ಕೆ ಆಗುತ್ತಿರುವ ಅಪಮಾನ ಹಾಗೂ ಆ ಸಮುದಾಯದ ನಾಯಕರನ್ನು ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿಗೆ ಬೇಸತ್ತು ಸ್ವಾಭಿಮಾನ ರಕ್ಷಣೆಗಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಸೇರಿದಂತೆ ಪ್ರಮುಖ ಲಿಂಗಾಯತ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದಿನ ರಾಜ್ಯಕ್ಕೆ ವಿಶೇಷವಾದ ದಿನ. ರಾಜ್ಯ ಹಾಗೂ ದೇಶದಲ್ಲಿ ಬದಲಾವಣೆ, ಅಭಿವೃದ್ಧಿ, ಪ್ರಗತಿ, ಒಗ್ಗಟ್ಟು ತರುವ ದಿನವಾಗಿದೆ ಎಂದು ಬಣ್ಣಿಸಿದರು.
ಸರಳ ಸಜ್ಜನಿಕೆಯ ನಾಯಕ ಆರು ಬಾರಿ ಶಾಸಕರಾಗಿ ಗೆದ್ದಿರುವ ರಾಜಕೀಯ ಜೀವನದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆ ಇಲ್ಲದ ಹಾಗೆ ಜಗದೀಶ್‌ಶೆಟ್ಟರ್ ಇಂದು ಕಾಂಗ್ರೆಸ್ ಸೇರುವ ಮೂಲಕ ಇಡೀ ರಾಷ್ಟ್ರಕ್ಕೆ ಒಂದು ದೊಡ್ಡ ಸಂದೇಶ ನೀಡಿದ್ದಾರೆ ಎಂದರು.
ಇವರ ಕಾಂಗ್ರೆಸ್ ಸೇರ್ಪಡೆಯಿಂದ ರಾಜ್ಯ ಹಾಗೂ ದೇಶದಲ್ಲಿ ಬದಲಾವಣೆಯ ಮುನ್ಸೂಚನೆ ಸಿಕ್ಕಂತಾಗಿದೆ. ಶೆಟ್ಟರ್ ಅವರನ್ನು ತುಂಬು ಹೃದಯದಿಂದ ಪಕ್ಷಕ್ಕೆ ಸ್ವಾಗಸಿದ್ದೇನೆ ಎಂದರು.ಚಾಮರಾಜನಗರದಿಂದ ಹಿಡಿದು ಬೆಳಗಾವಿಯವರೆಗೂ ನಿನ್ನೆ ರಾತ್ರಿಯಿಂದ ಬಿಜೆಪಿ ನಾಯಕರು ಹಾಗೂ ಶೆಟ್ಟರ್ ಅವರ ಅಭಿಮಾನಿಗಳು ಕಾಂಗ್ರೆಸ್ ಸೇರುತ್ತೇನೆ ಅವಕಾಶ ಮಾಡಿಕೊಡಿ ಎಂದು ದೂರವಾಣಿ ಮೂಲಕ ಕೋರಿದ್ದಾರೆ. ಇಂದು ತುರ್ತಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಎಲ್ಲರನ್ನು ಸೇರ್ಪಡೆ ಮಾಡಿಕೊಳ್ಳಲು ಆಗಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲೇ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದರು.
ಬಿಜೆಪಿಯಲ್ಲಿ ಲಿಂಗಾಯತ ಸಮುದಾಯಕ್ಕೆ ಅವಮಾನವಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಲಕ್ಷ್ಮಣಸವದಿ ಎಲ್ಲರಿಗೂ ಬಿಜೆಪಿ ಅವಮಾನ ಮಾಡಿದೆ. ಲಿಂಗಾಯತ ಸಮುದಾಯದ ಆತ್ಮ ಗೌರವಕ್ಕೆ ಧಕ್ಕೆಯಾಗಿದ್ದು, ಎಸ್.ಎಂ. ಕೃಷ್ಣ ಕಾಲದಲ್ಲಿ ಲಿಂಗಾಯತ ಸಮುದಾಯ ಹೇಗೆ ಕಾಂಗ್ರೆಸ್ ಪಕ್ಷಕ್ಕೆ ನಿಂತಿತ್ತೋ ಅದೇ ರೀತಿ ಈ ಬಾರಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಪರವಾಗಿ ನಿಲ್ಲಲಿದೆ ಎಂದರು.
ಕಾಂಗ್ರೆಸ್ ಸೇರ್ಪಡೆಯಾದ ಶೆಟ್ಟರ್ ಅವರು ಯಾವುದೇ ಷರತ್ ಹಾಕಿಲ್ಲ. ಬೇಷರತ್ತಾಗಿ ಪಕ್ಷ ಸೇರಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಕ್ಷಕ್ಕೆ ಇನ್ನೂ ಹಲವು ನಾಯಕರು ಸೇರಲು ಮುಂದಾಗಿದ್ದಾರೆ. ಆದರೆ ನಾವು ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚಿಂತನೆ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.