ಬಿಜೆಪಿಯಲ್ಲಿ ಲಿಂಗಾಯತರಿಗೆ ಉಳಿಗಾಲ ಇಲ್ಲ: ಮುಂಡ್ರಿಗಿ ನಾಗರಾಜ್


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಏ,16- ಲಿಂಗಾಯತ ಸಮುದಾಯದ ಮತ ಬ್ಯಾಂಕ್ ನಿಂದಲೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯಲ್ಲೀಗ ಲಿಂಗಾಯತ ಸಮುದಾಯಕ್ಕೆ ಉಳಿಗಾಲವಿಲ್ಲದಂತಾಗಿದೆ ಎಂದು ಬಳ್ಳಾರಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬಿ. ಮುಂಡ್ರಿಗಿ ನಾಗರಾಜ ಹೇಳಿದ್ದಾರೆ.
ಅವರು ಇಂದು ಬೆಳಿಗ್ಗೆ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಕಂಪ್ಲಿ ವಿಧಾನಸಭಾ  ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಎನ್.ಗಣೇಶ್ ಪರ ಪ್ರಚಾರದಲ್ಲಿ ಕೈ ಗೊಂಡು ಮಾತನಾಡುತ್ತಿದ್ದರು.
ಈಗಾಗಲೇ ಬಿಜೆಪಿಯಿಂದ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿದ್ದ ಯಡಿಯೂರಪ್ಪ, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಅವರನ್ನು ಅಷ್ಟೇ ಅಲ್ಲದೆ ಕುರುಬ ಸಮುದಾಯದ ಇತರ ಈಶ್ವರಪ್ಪ ಅವರನ್ನು ಚುನಾವಣಾ ರಾಜಕೀಯದಿಂದ ಹೊರಗಿಟ್ಟು ಲಿಂಗಾಯತ ಸಮುದಾಯಕ್ಕೆ ಅನ್ಯಾಯ  ಮಾಡಿದೆ.
ಮತ್ತೆ ರಾಜ್ಯದಲ್ಲಿ ಬಿಜೆಪಿ ಮೂಲಕ‌ ಪುರೋಹಿತಶಾಹಿ ತನ್ನ ಪ್ರಾಬಲ್ಯ ಮೆರೆಯಲು ಪ್ರಯತ್ನಿಸುತ್ತಿದೆ.
67 ವರ್ಷ ವಯಸ್ಸಿನ ಸುರೇಶ್ ಕುಮಾರ್ ಗೆ ಟಿಕೆಟ್ ನೀಡುತ್ತೆ, ಅದೇ 67 ವರ್ಷದ ಜಗದೀಶ್ ಶೆಟ್ಟರ್ ಗೆ ಟಿಕೆಟ್ ನಿರಾಕರಣೆ ಮಾಡುತ್ತದೆ ಎಂದರೆ ಆ ಪಕ್ಷದ ಧೋರಣೆ ಏನೆಂದು ಅರ್ಥವಾಗುತ್ತದೆ. ಆದರೆ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ. ಸಮುದಾಯದ 92 ವರ್ಷದ ಶಾಮನೂರು ಶಿವ ಶಂಕ್ರಪ್ಪ ಅವರಿಗೆ ಟಿಕೆಟ್ ನೀಡಿದೆ. ಅಷ್ಟೇ ಅಲ್ಲದೆ 40 ಕ್ಕೂ ಹೆಚ್ಚು ಲಿಂಗಾಯತರಿಗೆ ಟಿಕೆಟ್ ನೀಡಿದೆ. ಈ ಬಾರಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಗೆ ಹೆಚ್ಚಿನ  ಮತ ನೀಡಿ ಬಿಜೆಪಿಗೆ ಪಾಠ ಕಲಿಸಬೇಕೆಂದರು.
ಈ ಸಂದರ್ಭದಲ್ಲಿ ಪಕ್ಷದ  ಮುಖಂಡರಾದ ಎಲ್. ಮಾರೆಣ್ಣ, ಜಿ. ಗೋವರ್ಧನ, ಸಣ್ಣ ನಾಗರಾಜ, ಫೋಟೊರಾಜ, ವೆಂಕಟೇಶ್ ಹೆಗಡೆ, ಹಾಗೂ ಶ್ರೀಧರಗಡ್ಡೆ ಗ್ರಾಮದ ವಿವಿಧ ಮುಖಂಡರು ಇದ್ದರು.
ಗಣೇಶ್ ಅವರ ನಿರಂತರ ಪರಿಶ್ರಮ, ಐದು ವರ್ಷ ಅವರ ಕಾರ್ಯ ವೈಖರಿ ಅದ್ಭುತವಾಗಿದೆ.ತಡರಾತ್ರಿಯಲ್ಲೂ ರೈತರ ಸಂಕಷ್ಟಕ್ಕೆ ಶ್ರಮಿಸಿದ್ದಾರೆ, ಈ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ  ಗಣೇಶ್ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.