ಬಿಜೆಪಿಯಲ್ಲಿ ಗುಂಪುಗಾರಿಕೆಗೆ ಆಕ್ರೋಶ; ಸ್ಥಳೀಯ ಮುಖಂಡರ ಅಸಮಾಧಾನ


ಸಂಜೆವಾಣಿ ವಾರ್ತೆ
ದಾವಣಗೆರೆ, ಫೆ.೧; ಬಿಜೆಪಿ ಪಕ್ಷದಲ್ಲಿ ಇತ್ತೀಚಿನ ಕೆಲ ದಿನಗಳಿಂದ ನಡೆಯುತ್ತಿರುವ ಗುಂಪುಗಾರಿಕೆ ಹಾಗೂ ಕೆಲ ಮುಖಂಡರ ವರ್ತನೆಗೆ ಜಿಲ್ಲೆಯ‌ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ ಘಟನೆ ನಡೆದಿದೆ.ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ  ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರು ಸರಣಿ ಸಭೆ ನಡೆಸಿ ಈ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದ್ದಾರೆ. ಲೋಕಸಭೆ ಚುನಾವಣೆ ಇದ್ದಾಗಲೇ ಕೆಲವರು ಹುಟ್ಟು ಹಾಕುತ್ತಿರುವ ಗೊಂದಲ, ಗದ್ದಲಗಳ ಬಗ್ಗೆ ಬಹುತೇಕ ಎಲ್ಲರಿಂದಲೂ ತೀವ್ರ ಅಸಮಾಧಾನ ವ್ಯಕ್ತವಾಯಿತಲ್ಲದೇ, ನಿಮ್ಮ ಇಂತಹ ಕೆಲಸ ಸಾವಿರಾರು ಕಾರ್ಯಕರ್ತರ ಕೆಂಗಣ್ಣಿಗೂ ಗುರಿಯಾಗಿದೆ ಎಂಬ ಎಚ್ಚರಿಕೆ ನೀಡಲಾಯಿತು ಎಂದು ಗೊತ್ತಾಗಿದೆ.ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು, ಮಹಿಳಾ ಮುಖಂಡರು, ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಜಿ.ಮಲ್ಲಿಕಾರ್ಜುನಪ್ಪನವರು ಸ್ಪರ್ಧಿಸಿದಾಗಿನಿಂದ ತೀರಾ ಈಚಿನವರೆಗೂ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಇದೇ ಜಿಲ್ಲೆಯವರಾಗಿದ್ದರು. ಆದರೆ, ಮಾಜಿ ಸಟಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ಸಿನ ನಾಯಕರು, ಸಿಎಂ, ಡಿಸಿಎಂ, ಕೆಲ ಸಚಿವರು, ವಿಶೇಷವಾಗಿ ದಾವಣಗೆರೆ ಕಾಂಗ್ರೆಸ್ಸಿನ ನಾಯಕರ ಭೇಟಿ ಮಾಡಿ ಬಂದ ನಂತರವಂತೂ ಕಾಂಗ್ರೆಸ್ಸಿನವರ ಮಾತುಗಳು ರೇಣುಕಾಚಾರ್ಯ ಮತ್ತಿತರರಿಂದ ಬರುತ್ತಿವೆ. ಇದೆಲ್ಲದರ ಹಿಂದೆ ಯಾವ ಕಾಣದ ಕೈಗಳಿವೆ ಎಂಬ ನಮ್ಮ ಪ್ರಶ್ನೆಗೆ ಮುಖಂಡರೆನಿಸಿಕೊಂಡವರು ಉತ್ತರ ಕೊಡಲಿ ಎಂಬ ಒತ್ತಾಯ ಕೇಳಿ ಬಂದಿದೆ.ವಿಧಾನಸಭೆ ಚುನಾವಣೆಗಳ ವೇಳೆ ಟಿಕೆಟ್‌ ವಿಚಾರಕ್ಕಾಗಲೀ, ಹಣದ ವಿಚಾರವೇ ಆಗಿರಲಿ ಎಲ್ಲದಲ್ಲೂ ಸಿದ್ದೇಶಪ್ಪ ಬೇಕು. ಈಗ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಸಿನವರೇ ಬೆಚ್ಚಿ ಬೀಳುವಂತೆ ಬಿಜೆಪಿಯಲ್ಲಿರುವ ಕೆಲವರು ಕಾಂಗ್ರೆಸ್ಸಿನವರ ಮಾತುಗಳನ್ನಾಡುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸತತವಾಗಿ 4 ಚುನಾವಣೆಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೆ ಭದ್ರ ನೆಲೆ ಮಾಡಿಕೊಟ್ಟವರು ಸಿದ್ದೇಶ್ವರ. ಒಟ್ಟು 6 ಸಲ ಬಿಜೆಪಿ ಗೆದ್ದಿದ್ದರೆ ಸಿದ್ದೇಶ್ವರರ ಕೊಡುಗೆ ಇದೆಯೆಂಬುದನ್ನು ಈಗ ವಿರೋಧಿಸುತ್ತಿರುವವರು ಅರ್ಥ ಮಾಡಿಕೊಳ್ಳಬೇಕು. ಇದ್ದಕ್ಕಿದ್ದಂತೆ ಇಂತಹವರಿಗೆ ಸಿದ್ದೇಶಪ್ಪ ಬೇರೆ ಜಿಲ್ಲೆಯವರಾದರೆ ಎಂದು ಅವರು ಪ್ರಶ್ನಿಸಿದರೆನ್ನಲಾಗಿದೆ.ಸಭೆಯಲ್ಲಿಹರಿಹರ ಶಾಸಕ ಬಿ.ಪಿ.ಹರೀಶ ಗೌಡ, ಉತ್ತರ ಅಧ್ಯಕ್ಷ ಬೇತೂರು ಸಂಗನಗೌಡ, ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ, ಮುಖಂಡರಾದ ಬಿ.ಎಸ್.ಜಗದೀಶ, ಟಿ.ಶ್ರೀನಿವಾಸ ದಾಸಕರಿಯಪ್ಪ, ಮಂಜಾನಾಯ್ಕ, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾ‍ಧವ್, ಎ.ವೈ.ಪ್ರಕಾಶ, ದೇವರಮನಿ ಶಿವಕುಮಾರ, ರಾಜನಹಳ್ಳಿ ಶಿವಕುಮಾರ, ಕೊಂಡಜ್ಜಿ ಜಯಪ್ರಕಾಶ, ವಕೀಲ ರಾಘವೇಂದ್ರ ಮೊಹರೆ, ಮಾಜಿ ಮೇಯರ್ ಗಳಾದ ಡಿ.ಎಸ್.ಉಮಾ ಪ್ರಕಾಶ, ಎಸ್‌.ಟಿ.ವೀರೇಶ, ಪಾಲಿಕೆ ಉಪ ಮೇಯರ್ ಯಶೋಧ ಯೋಗೇಶ, ವಿಪಕ್ಷ ನಾಯಕ ಕೆ.ಎಸ್.ಪ್ರಸನ್ನಕುಮಾರ, ಆರ್.ಎಲ್.ಶಿವಪ್ರಕಾಶ, ಆರ್.ಶಿವಾನಂದ, ಮಾಜಿ ಉಪ ಮೇಯರ್ ಪಿ.ಎಸ್.ಜಯಣ್ಣ, ಆನಂದರಾವ್ ಸಿಂಧೆ, ರಾಜು ನೀಲಗುಂದ, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಪಿ.ಎಸ್.ಬಸವರಾಜ, ಕೆ.ಹೇಮಂತಕುಮಾರ, ಮುಕುಂದ, ಶಿವಾಜಿ ರಾವ್‌, ಸುರೇಶ ಗಂಡಗಾಳೆ ಸೇರಿದಂತೆ ಅನೇಕರಿದ್ದರು.