ಬಿಜೆಪಿಯನ್ನು ಮತ್ತೆ ಗೆಲ್ಲಿಸಿ-ಶೋಭಾ ಕರಂದಾಜ್ಲೆ

ಬೆಂಗಳೂರು.ನ೧೯:ಡಿ.೧೦ರ ವಿಧಾನಪರಿಷತ್ ಚುನಾವಣೆ ರಾಜ್ಯದ ಮಿನಿ ಸಮರ. ಇದರಲ್ಲಿ ವಿಧಾನಪರಿಷತ್ತಿನ ಸಭಾ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮತ್ತೆ ಗೆಲ್ಲಿಸಿ ಎಂದು ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.
ಉಡುಪಿಯಲ್ಲಿ ಇಂದು ಜನಸ್ವರಾಜ್ ಯಾತ್ರೆಯಲ್ಲಿ ಮಾತನಾಡಿದ ಅವರು, ಸರಕಾರದ ಯಾವುದೇ ಮಸೂದೆ ಮಂಜೂರಾಗಲು ವಿಧಾನಪರಿಷತ್‌ನಲ್ಲೂ ಬಹುಮತ ಬೇಕು. ವಿಧಾನಸಭೆಯಲ್ಲಿ ಮಂಜೂರಾದ ಗೋಹತ್ಯಾ ಬಿಲ್ ವಿಧಾನಪರಿಷತ್‌ನಲ್ಲಿ ಮಂಜೂರಾಗಲು ಕಷ್ಟವಾಯಿತು. ಆದ್ದರಿಂದ ನಾವು ಹೆಚ್ಚು ಸ್ಥಾನ ಗೆಲ್ಲಬೇಕಿದೆ ಎಂದರು. ನರೇಂದ್ರ ಮೋದಿಯವರಿಗೆ ದಕ್ಷಿಣ ಭಾರತದಲ್ಲಿ ಇರುವ ಬೆಂಬಲಕ್ಕೆ ಈ ಚುನಾವಣೆ ಒರೆಗಲ್ಲು ಇದ್ದಂತೆ ಎಂದು ತಿಳಿಸಿದರು. ಉಡುಪಿಯಲ್ಲಿ ಪಕ್ಷ ಗೆಲ್ಲುವ ವಿಶ್ವಾಸ ನಮಗಿದೆ ಎಂದರು.
ಉತ್ತರ ಪ್ರದೇಶದ ಚುನಾವಣೆ ಎಂದರೆ ರಾಮಮಂದಿರದ ಚುನಾವಣೆ. ಉತ್ತರ ಪ್ರದೇಶದಲ್ಲಿ ಯೋಗಿಯವರ ನೇತೃತ್ವದಲ್ಲಿ ಮತ್ತೆ ನಮ್ಮ ಸರಕಾರ ಬರಬೇಕಿದೆ. ಅದೇರೀತಿ ರಾಜ್ಯದಲ್ಲೂ ಪಕ್ಷವು ಅತಿ ಹೆಚ್ಚು ವಿಧಾನಪರಿಷತ್ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲಬೇಕಿದೆ ಎಂದು ತಿಳಿಸಿದರು. ನರೇಂದ್ರ ಮೋದಿಯವರು ಈಗ ಪ್ರಪಂಚದ ನಾಯಕರಾಗಿದ್ದಾರೆ. ನುಡಿದಂತೆ ನಡೆದ ನಾಯಕ ಅವರು ಎಂದು ವಿವರಿಸಿದರು.
ಕೋಟ ಶ್ರೀನಿವಾಸ ಪೂಜಾರಿಯವರು ವಿಧಾನಪರಿಷತ್‌ನಲ್ಲಿ ಪಕ್ಷ ಮತ್ತು ಸರಕಾರವನ್ನು ಸಮರ್ಥವಾಗಿ ಪ್ರತಿನಿಧಿಸಿ ಉತ್ತರ ನೀಡುತ್ತಾರೆ. ಅವರನ್ನು ಗರಿಷ್ಠ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಸಹಕಾರ ಇಲಾಖೆ ಅಧಿಕಾರಿಗಳು ಜನರಿಗೆ ಸರಿಯಾಗಿ ಸ್ಪಂದಿಸದೆ ಇದ್ದರೆ ಅದನ್ನು ಸಹಿಸಲಾಗದು ಎಂದು ಎಚ್ಚರಿಸಿದರು.
ಸಚಿವರಾದ ಎಸ್. ಅಂಗಾರ, ವಿ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ವಿನಯ್ ಬಿದರೆ, ಪಕ್ಷದ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಸುಕುಮಾರ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ರಘುಪತಿ ಭಟ್, ವಿಭಾಗ ಪ್ರಭಾರಿಗಳಾದ ಉದಯ ಕುಮಾರ್ ಶೆಟ್ಟಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎಂ ಶಂಕರಪ್ಪ, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಯಶ್‌ಪಾಲ್ ಸುವರ್ಣ, ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.