
ತಿ.ನರಸೀಪುರ: ಮಾ.05:- ದೇಶವನ್ನು ಅಭಿವೃದ್ಧಿಯೆಡೆಗೆ ನಡೆಸುತ್ತಿರುವ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ದೇಶ ಮತ್ತು ರಾಜ್ಯದ ಜನತೆಯ ‘ಸಂಕಲ್ಪ’ಆಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇಗುಲಕ್ಕೆ ಪೂಜೆ ಸಲ್ಲಿಸಿದ ನಂತರ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಸಂಸದ ಬಿ.ವೈ.ರಾಘವೇಂದ್ರ ಜೊತೆಗೂಡಿ
ವಿಜಯ ಸಂಕಲ್ಪ ರಥ ಯಾತ್ರೆಗೆ ಅವರು ಚಾಲನೆ ನೀಡಿ ಮಾತನಾಡಿದರು. ಬಿಜೆಪಿ ಪಕ್ಷ 150 ಸೀಟುಗಳನ್ನು ಗೆಲ್ಲಲು ರಾಜ್ಯದಾದ್ಯಂತ ವಿಜಯ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು,ನಮ್ಮ ಪಕ್ಷ ಸ್ಪಷ್ಟ ಬಹುಮತ ಪಡೆಯುವುದು ಶತಸಿದ್ಧ.ಇದ್ದಕ್ಕೆ ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಸರ್ಕಾರ ನೀಡುತ್ತಿರುವ
ಉತ್ತಮ ಆಡಳಿತ ಕಾರಣ.ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಜನಪರ ಯೋಜನೆಗಳನ್ನು ಕೈಗೊಳ್ಳುತ್ತಿದ್ದು ,ಜನತೆ ಬಿಜೆಪಿ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ಸೂಚಿಸುವ ಮೂಲಕ ದೇಶದ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಲು ಸಹಕರಿಸುತ್ತಿದ್ದಾರೆ ಎಂದರು.
ಜಾಗತಿಕ ಮಟ್ಟದಲ್ಲಿ ಭಾರತವನ್ನು ಬಲಾಢ್ಯ ರಾಷ್ಟ್ರವಾಗಿ ರೂಪಿಸುವ ಕನಸು ಹೊತ್ತಿರುವ ಪ್ರಧಾನಿ ಮೋದಿ,ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಎದುರು ಸೆಟೆದು ನಿಂತು ಆರ್ಥಿಕ ಪ್ರಗತಿಯನ್ನು ಏರುಗತಿಯಲ್ಲಿ ಸಾಗಿಸುವತ್ತ ದಾಪುಗಾಲು ಇಟ್ಟಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಅವಸಾನದ ಅಂಚಿನಲ್ಲಿದೆ.2023ರ ಕರ್ನಾಟಕ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಕೊನೆ ಮೊಳೆ.ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ,ಡಿ.ಕೆ.ಶಿವಕುಮಾರ್ ಮತ್ತಿತರು ಬಿಜೆಪಿ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದು, ಶಿವಕುಮಾರ್ ‘ಭ್ರಷ್ಟಾಚಾರದ ಪಿತಾಮಹ’ ಮತ್ತು ಸಿದ್ದರಾಮಯ್ಯ ಅರ್ಕಾವತಿ ಡಿನೋಟಿಫೈನಲ್ಲಿ ಸಾವಿರಾರು ಕೋಟಿಗಳ ರೂಗಳ ಹಗರಣ ಮಾಡಿದ್ದಾರೆ. ಕಡು ಭ್ರಷ್ಟ ಕಾಂಗ್ರೆಸ್ ನಿಂದ ದೇಶದ ಜನತೆ ಬಹುದೂರ ಸಾಗಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮುಖೇನ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ,ಇಂದು ದೇಶದ ಜನತೆ ಬಿಜೆಪಿ ಪಕ್ಷಕ್ಕೆ ಅದ್ಭುತ ಸಹಕಾರ ನೀಡುತ್ತಿದ್ದು,ಇದಕ್ಕೆ ಇತ್ತೀಚಿನ ಈಶಾನ್ಯ ರಾಜ್ಯಗಳ ಚುನಾವಣೆ ಫಲಿತಾಂಶವೇ ಸಾಕ್ಷಿ.ನೆರೆಯ ಪಾಕಿಸ್ತಾನ ,ಶ್ರೀಲಂಕಾ ದೇಶಗಳು ದಿವಾಳಿಯಾಗಿದ್ದು,ಪ್ರಧಾನಿ ನರೇಂದ್ರ ಮೋದಿಯವರು ನೇತೃತ್ವದಲ್ಲಿ ಭಾರತ ಸದೃಢವಾಗಿದೆ.ಅವರು ಕೊರೊನ ಮತ್ತು ಆರ್ಥಿಕ ವಿಷಮಸ್ಥಿತಿಯಲ್ಲಿ ಭಾರತವನ್ನು ಉತ್ತಮವಾಗಿ ಮುನ್ನೆಡೆಸಿದ್ದಾರೆ.ಹಾಗಾಗಿ ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ.ವರುಣಾ ಮತ್ತು ತಿ.ನರಸೀಪುರ ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿಗಳನ್ನು ವರಿಷ್ಠರು ಆಯ್ಕೆ ಮಾಡಲಿದ್ದು, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಡೆ ಕಾರ್ಯಕರ್ತರು ಶ್ರಮವಹಿಸಬೇಕಿದೆ ಎಂದರು.
ಸಚಿವ ಕೋಟಾ ಶ್ರೀನಿವಾಸ ಪೂಜಾರಿ,ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್,ಮಾಜಿ ಶಾಸಕರಾದ ಎಲ್.ಎನ್.ಭಾರತೀಶಂಕರ್, ಸಿ.ರಮೇಶ್,ಜಿಲ್ಲಾ ಎಸ್.ಸಿ.ಮೋರ್ಚಾದ ಸಾಮ್ರಾಟ್ ಸುಂದರೇಶನ್, ಗ್ರಾಮಾಂತರ ಉಪಾಧ್ಯಕ್ಷ ಸಿದ್ನುಂಡಿ ದಾಸಯ್ಯ, ಕರೋಹಟ್ಟಿ ಮಹದೇವಯ್ಯ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ,ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು .ಸಿದ್ದಲಿಂಗಸ್ವಾಮಿ, ತೋಟದಪ್ಪ ಬಸವರಾಜು ,ಮಾಜಿ ಜಿ.ಪಂ.ಸದಸ್ಯ ಸದಾನಂದ, ಮೈಮುಲ್ ನಿರ್ದೇಶಕ ಅಶೋಕ್,ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕ ಮಹದೇವಸ್ವಾಮಿ,ಮದ್ದೂರು ಅರವಿಂದ್,ಯಶೋಧ,ಕ್ಷೇತ್ರ ಅಧ್ಯಕ್ಷ ಕೆ .ಸಿ .ಲೋಕೇಶ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಡವಾಡಿ ಮಹೇಶ್,ಹೆಳವರಹುಂಡಿ ಸಿದ್ದಪ್ಪ ,ಟೌನ್ ಬಿಜೆಪಿ ಅಧ್ಯಕ್ಷ ಕಿರಣ್,ಮಾಧ್ಯಮ ವಕ್ತಾರ ಶಿವಕುಮಾರ್(ಬಡ್ದು) ಇತರರು ಹಾಜರಿದ್ದರು.