ಬಿಜೆಪಿಯದ್ದು ಪಿಕ್‌ಪಾಕೆಟ್ ಸರ್ಕಾರ:ಡಿಕೆಶಿ

ಬೆಂಗಳೂರು,ಜೂ.೧೧- ಪೆಟ್ರೋಲ್-ಡೀಸೆಲ್ ದರ ಏರಿಕೆಯಿಂದ ಕೇಂದ್ರ ಸರ್ಕಾರ ಜನರ ಜೇಬಿಗೆ ಕನ್ನ ಹಾಕುತ್ತಿದೆ. ಇದು ಪಿಕ್‌ಪಾಕೆಟ್ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಪೆಟ್ರೋಲ್-ಡೀಸೆಲ್ ದರ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ನಡೆಸಿರುವ ೧೦೦ ನಾಟ್‌ಔಟ್ ಆಂದೋಲನದ ಭಾಗವಾಗಿ ಇಂದು ಬೆಂಗಳೂರಿನ ಶಿವಾನಂದ ವೃತ್ತ ಪೆಟ್ರೋಲ್ ಬಂಕ್ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೆಟ್ರೋಲ್-ಡೀಸೆಲ್ ದರ ಏರಿಕೆಯಿಂದ ಕೇವಲ ವಾಹನ ಹೊಂದಿರುವವರಿಗೆ ಮಾತ್ರ ಹೊರೆಯಾಗುತ್ತಿಲ್ಲ. ಈ ದರ ಏರಿಕೆಯಿಂದೆ ಎಲ್ಲ ದಿನಸಿ ಪದಾರ್ಥಗಳು ಹಾಗೂ ಇತರ ವಸ್ತುಗಳ ಬೆಲೆಯೂ ಏರಿಕೆಯಾಗಿ ಪ್ರತಿ ನಾಗರೀಕನಿಗೂ ಹೊರೆಯಾಗುತ್ತಿದೆ ಎಂದರು.
ಕೇಂದ್ರ ಸರ್ಕಾರ ಪಿಕ್‌ಪಾಕೆಟ್ ಸರ್ಕಾರ ಎಂದು ಟೀಕಿಸಿದ ಅವರು, ದರ ಏರಿಕೆಯಿಂದ ಕೇಂದ್ರ ಸರ್ಕಾರ ಜನರ ಜೇಬಿಗೆ ಕನ್ನ ಹಾಕುತ್ತಿದೆ. ಈ ಪಿಕ್‌ಪಾಕೆಟ್‌ನ್ನು ನಿಲ್ಲಿಸಬೇಕು ಎಂದು ಡಿಕೆಶಿ ಒತ್ತಾಯಿಸಿದರು. ತೈಲ ಬೆಲೆಗಳ ತೆರಿಗೆಯಿಂದ ಕೇಂದ್ರ ಸರ್ಕಾರ ೨೦ ಲಕ್ಷದ ೬೦ ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಿಸಿ, ಆದಾಯ ವೃದ್ಧಿ ಮಾಡಿಕೊಂಡು ಬೊಕ್ಕಸ ತುಂಬಿಸಿಕೊಂಡಿದೆ ಎಂದು ಅವರು ಹರಿಹಾಯ್ದರು.
ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬ ಪ್ರಜೆಗೂ ಕೇಂದ್ರಸರ್ಕಾರ ಬರೆ ಎಳೆದಿದೆ. ಪೆಟ್ರೋಲ್-ಡೀಸೆಲ್ ದರ ಏರಿಕೆಯಿಂದ ಪ್ರತಿ ವಸ್ತುವೂ ದುಬಾರಿಯಾಗಿದೆ ಎಂದರು. ಈ ಹಿಂದೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಒಂದೆರೆಡು ರೂಪಾಯಿ ದರ ಏರಿಕೆಯಾದರೆ, ಇದೇ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಹಾಗೂ ಸಚಿವರು ಗಲಾಟೆ ಮಾಡುತ್ತಿದ್ದರು. ಬಿಜೆಪಿ ಸರ್ಕಾರ ಕಳೆದ ಜನವರಿಯಿಂದ ಇಲ್ಲಿಯವರೆಗೂ ೪೨ ಬಾರಿ ಬೆಲೆ ಏರಿಕೆ ಮಾಡಿದೆ. ಏಪ್ರಿಲ್‌ನಲ್ಲಿ ಚುನಾವಣೆ ಇದ್ದುದ್ದರಿಂದ ದರ ಏರಿಕೆಯಾಗಿಲ್ಲ. ಉಳಿದ ಎಲ್ಲ ೫ ತಿಂಗಳು ಬೆಲೆ ಹೆಚ್ಚಿದೆ ಎಂದರು.
ಸಿದ್ದರಾಮಯ್ಯ ವಾಗ್ದಾಳಿ
ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು, ಪೆಟ್ರೋಲ್-ಡೀಸೆಲ್ ದರ ಏರಿಕೆಯನ್ನು ಖಂಡಿಸಿ ರಾವಣ ರಾಜ್ಯದಲ್ಲಿ ಪೆಟ್ರೋಲ್ ದರ ೫೯ ರೂ. ಇದೆ, ರಾಮನ ರಾಜ್ಯದಲ್ಲಿ ಪೆಟ್ರೋಲ್ ದರ ೧೦೦ ರೂ. ಆಗಿದೆ ಎಂದು ವ್ಯಂಗ್ಯವಾಡಿ ರಾಮನ ಹೆಸರನ್ನು ಹೇಳಲು ನಾಚಿಕೆಯಾಗಲ್ವೇ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಒಂದು ತಿಂಗಳಲ್ಲಿ ೧೯ ಬಾರಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಜನ ಸಾಮಾನ್ಯರ ಕಷ್ಟ ಬಿಜೆಪಿ ಸರ್ಕಾರಕ್ಕೆ ಅರ್ಥ ಆಗುತ್ತಿಲ್ಲ. ಸರ್ಕಾರವನ್ನು ಎಚ್ಚರಗೊಳಿಸಲು ಹೋರಾಟ ನಡೆಸಿದ್ದೇವೆ. ಜನ ಕೂಡ ಬಿಜೆಪಿ ಸರ್ಕಾರದ ವಿರುದ್ಧ ದನಿ ಎತ್ತಬೇಕು ಎಂದರು.
ತೆರಿಗೆ ಕಡಿಮೆ ಮಾಡಿ
ರಾಜ್ಯಸರ್ಕಾರ ನಾಗರಿಕರಿಗೆ ಅನುಕೂಲ ಮಾಡಿಕೊಡಲು ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ಹಿಂದೆ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಕಚ್ಛಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್‌ಗೆ ೧೩೦ ಡಾಲರ್ ಇತ್ತು. ಆಗ ಪೆಟ್ರೋಲ್-ಡೀಸೆಲ್ ಬೆಲೆ ೭೦ ರೂ. ದಾಟಿರಲಿಲ್ಲ. ಇಂದು ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ೭೦ ಡಾಲರ್ ಇದೆ. ಆದರೂ ಪೆಟ್ರೋಲ್ ಬೆಲೆ ೧೦೦ ದಾಟಿದೆ. ಪೆಟ್ರೋಲ್ ಮೇಲೆ ೩೩ ರೂ. ಸೆಸ್ ಹಾಕಿದ್ದಾರೆ ಎಂದು ಟೀಕಿಸಿದರು.
ಈ ಪ್ರತಿಭಟನೆ ೫ ದಿನ ನಡೆಯುತ್ತದೆ. ೫ ಸಾವಿರ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನಡೆಸಿದ್ದೇವೆ. ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಮೋದಿ ಜನರ ರಕ್ತ ಹೀರುತ್ತಿದ್ದಾರೆ ಎಂದೂ ಟೀಕಿಸಿದ ಅವರು, ಬೆಲೆ ಏರಿಕೆ ಮಾಡಿ ತಿಗಣೆ ತರಹ ಜನರ ರಕ್ತ ಕುಡಿಯುತ್ತಿರುವ ಮೋದಿ, ನಿಮಗೆ ನಾಚಿಕೆ ಆಗಲ್ವೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.