ಬಿಜೆಪಿಗೆ ಶಕ್ತಿ ತುಂಬಿರುವ ದ.ಕ-ಉಡುಪಿ ಜನತೆ: ಮಾಧುಸ್ವಾಮಿ 

ಬಂಟ್ವಾಳ, ನ.1೯- ಅವಿಭಜಿತ ದ.ಕ. ಜಿಲ್ಲೆಯ ಅಂರ್ತಜಲ ವೃದ್ಧಿಗೆ 3975  ಸಾವಿರ ಕೋಟಿ ರೂ. ಮೀಸಲಿಟ್ಟು, ಪ್ರತೀ ವರ್ಷ 500 ಕೋಟಿ ರೂ.ವನ್ನು ಬಿಡುಗಡೆಗೊಳಿಸಲಾಗುತ್ತದೆ. ಈ ವರ್ಷವು ಬಜೆಟ್ ನಲ್ಲಿ ಮೀಸಲಿರಿಸಿ ಮಂಜೂರುಗೊಳಿಸಿದೆ. ಕಳೆದ ನಾಲ್ಕು ವರ್ಷದಲ್ಲಿ‌ ಸಣ್ಣ ನೀರಾವರಿ ಇಲಾಖೆಯಿಂದ ಬಂಟ್ವಾಳ ಕ್ಷೇತ್ರಕ್ಕೆ 262 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದ್ದು, ಕರಾವಳಿಯ ಪ್ರಮುಖ ಸಮಸ್ಯೆಗಳಾದ ಡೀಮ್ಡ್ ಅರಣ್ಯ, ಇ-ಸೊತ್ತು, ಕುಮ್ಕಿ, ಮರಳು ನೀತಿ ವಿಚಾರದಲ್ಲಿ ಬಿಜೆಪಿ ಸರಕಾರ ದಿಟ್ಟ ಹೆಜ್ಜೆ ಇರಿಸಿದೆ ಎಂದು ರಾಜ್ಯದ ಕಾನೂನು, ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಇಲಾಖಾ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಜಿಲ್ಲೆಯ ಜೀವನದಿ ನೇತ್ರಾವತಿ ನದಿಗೆ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಸುಮಾರು 135 ಕೋಟಿ ರೂ. ವೆಚ್ಚದಲ್ಲಿ ಬಂಟ್ವಾಳ ಸಮೀಪದ ಜಕ್ರಿಬೆಟ್ಟುವಿನಿಂದ ನರಿಕೊಂಬು‌ ಗ್ರಾಮವನ್ನು‌ ಸಂಪರ್ಕ ಬೆಸೆಯುವ ನಿಟ್ಟಿನಲ್ಲಿ ಅಣೆಕಟ್ಟು, ಜತೆಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಶುಕ್ತವಾರ ಅವರು ಜಕ್ರಿಬೆಟ್ಟುವಿನ ನೇತ್ರಾವತಿ ನದಿ ಕಿನಾರೆ ಬಳಿ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಣ್ಣ ನೀರಾವರಿ ಇಲಾಖೆ ಮಾತಿನಲ್ಲಿ ಸಣ್ಣದು. ಕೃತಿಯಲ್ಲಿ ದೊಡ್ಡದು ಮತ್ತು ಮಹತ್ವದ್ದಾಗಿದೆ. ಎತ್ತಿನಹೊಳೆ ಜಾರಿಯಾದಲ್ಲಿ ನಾವು ಫಲಾನುಭವಿಗಳಾಗಿದ್ದು ಹಾಗಾಗಿ ಈ ಜಿಲ್ಲೆಯ ಋಣ ನಮ್ಮ ಮೇಲಿದೆ. ಅಂತರ್ಜಲ ವೃದ್ಧಿಯ ಜೊತೆಗೆ ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿಗೆ ಸಹಾಯಕ ವಾಗಲಿದೆ ಎಂದ ಸಚಿವರು, ಸಮುದ್ರಕ್ಕೆ ಹರಿದು ಹೋಗುವ ವ್ಯರ್ಥ ನೀರನ್ನು ಸಂಗ್ರಹಿಸಿ ಬಳಸುವ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸುವ ಚಿಂತನೆ ಇದೆ. ನಮ್ಮ ಪಕ್ಷಕ್ಕೆ ದ.ಕ. ಮತ್ತು ಉಡುಪಿ ಜಿಲ್ಲೆಯ ಜನತೆ ಶಕ್ತಿ‌ ತುಂಬಿದ್ದಾರೆ ಮತ್ತು ಆಶೀರ್ವಾದ ನೀಡುತ್ತಿದ್ದಾರೆ. ಇಲ್ಲಿಗೆ ಎಷ್ಟು ದೊಡ್ಡ ಯೋಜನೆ ಕೊಟ್ಟರೂ ಜಿಲ್ಲೆಯ ಜನರ ಋಣ ತೀರಿಸಲು ಸಾಧ್ಯವಿಲ್ಲ. ಹಾಗಾಗಿ ಅಭಿವೃದ್ಧಿಯಲ್ಲಿ ನಮ್ಮ ಆದ್ಯತೆ ದ.ಕ. ಜಿಲ್ಲೆಗೆ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಎತ್ತಿನ ಹೊಳೆ ವಿರುದ್ಧದ ಹೋರಾಟದ ಫಲವೇ ಪಶ್ಚಿಮ ವಾಹಿನಿ ಯೋಜನೆಯಾಗಿದ್ದು, ನೀರಿನ ಹಾಹಾಕಾರ ತಡೆಯುವ ಕೆಲಸ ಎಂದೋ ಆಗಬೇಕಿತ್ತು. ಆದರೆ ಈಗ ಕಾಲ ಕೂಡಿ ಬಂದಿದೆ. ಈ ಡ್ಯಾಂ ನಿರ್ಮಾಣದಿಂದ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಗಲಿದೆ ಎಂದರು. ತುಂಬೆ ವೆಂಟೆಡ್ ಡ್ಯಾಂನಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರಿನ ಕೊರತೆ ಯಾದಲ್ಲಿ ಈ ಡ್ಯಾಂನಿಂದ ನೀರು ಪೂರೈಸುವ ಸಾಮಥ್ಯ೯ ಹೊಂದಲಿದೆ ಎಂದರು. ಮಂಗಳೂರು ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಗೋಕುಲ್ ದಾಸ್ ಅವರು ಸೇತುವೆ ಹಾಗೂ ಅಣೆಕಟ್ಟು ಯೋಜನೆಯ ಮಾಹಿತಿ ನೀಡಿ, ಈ ಅಣೆಕಟ್ಟು 7.50 ಮೀಟರ್ ಅಗಲದ ಈ ಸೇತುವೆಯಲ್ಲಿ ವಾಹನ ಸಂಚಾರಕ್ಕೂ ಅವಕಾಶವಿದ್ದು ಅಣೆಕಟ್ಟು 21 ಗೇಟ್ ಹೊಂದಲಿದೆ. 4.50 ಮೀ. ಎತ್ತರದಲ್ಲಿ ನೀರು ಸಂಗ್ರಹಿಸಲಾಗುವುದು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿದರು. ನರಿಕೊಂಬು ಗ್ರಾ.ಪಂ. ಅಧ್ಯಕ್ಷೆ ವಿನುತಾ ಪುರುಷೋತ್ತಮ್ , ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ‌, ಬಂಟ್ಚಾಳ ತಹಶೀಲ್ದಾರ್ ಡಾ.ಸ್ಮಿತಾ ರಾಮು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸದಸ್ಯೆ ಸುಲೋಚನಾ ಜಿ.ಕೆ.ಭಟ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್  ವಿಷ್ಣು‌ಕಾಮತ್, ಗುತ್ತಿಗೆದಾರ ರಾಜೇಂದ್ರ ಕಾರಂತ್ ವೇದಿಕೆಯಲ್ಲಿದ್ದರು. ಬಂಟ್ಚಾಳ ನಗರ ಯೋಜನಾ ಪ್ರಾಧಿಕಾರದ  ಅಧ್ಯಕ್ಷ ದೇವದಾಸ್ ಶೆಟ್ಟಿ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.