ಬಿಜೆಪಿಗೆ ರೈ ತರಾಟೆ

ಬೆಂಗಳೂರು,ಮಾ.೧೪-ಎಸ್‌ಎಸ್.ರಾಜಮೌಳಿ ನಿರ್ದೇಶನದ ಟಾಲಿವುಡ್ ಸೂಪರ್‌ಸ್ಟಾರ್‌ಗಳಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್‌ಚರಣ್ ಅಭಿನಯದ ತೆಲುಗು ಸಿನಿಮಾ ಆರ್‌ಆರ್‌ಆರ್‌ನ ನಾಟು ನಾಟು ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಲಭಿಸಿದೆ. ದೇಶ ವಿದೇಶದ ಗಣ್ಯರು, ಸೆಲೆಬ್ರಿಟಿಗಳು, ಅಭಿಮಾನಿಗಳು ಸೇರಿದಂತೆ ಅನೇಕರು ಚಿತ್ರ ತಂಡಕ್ಕೆ ಅಭಿನಂದನೆ ತಿಳಿಸುತ್ತಿದ್ದಾರೆ. ಈ ಸಾಲಿನಲ್ಲಿ ರಾಜಕೀಯ ನಾಯಕರು ಕೂಡ ಸೇರಿದ್ದಾರೆ.ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಬಿಜೆಪಿ ನಾಯಕರು ಶುಭಾಶಯಗಳನ್ನು ಕೋರಿದ್ದಾರೆ.
ಆದರೆ, ಹಿಂದೊಮ್ಮೆ ಕೆಲವು ಬಿಜೆಪಿ ನಾಯಕರು ಆರ್‌ಆರ್‌ಆರ್ ಸಿನಿಮಾವನ್ನು ಟೀಕಿಸಿದ್ದರು. ಇದನ್ನು ಟ್ವಿಟರ್‌ನಲ್ಲಿ ಪ್ರಸ್ತಾಪಿಸಿರುವ ನಟ ಪ್ರಕಾಶ್ ರಾಜ್ ಟೀಕಾ ಪ್ರಹಾರ ನಡೆಸಿದ್ದಾರೆ. ಆರ್‌ಆರ್‌ಆರ್ ಸಿನಿಮಾವನ್ನು ಬಹಿಷ್ಕರಿಸಲು ಹೇಳಿದ್ದ, ಚಿತ್ರ ಮಂದಿರಗಳನ್ನು ಸುಡುವುದಾಗಿ ಹೇಳಿದ್ದ ಬಿಜೆಪಿಯ ಧರ್ಮಾಂಧರು ಈಗ ಎಲ್ಲಿ ಅಡಗಿಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯ ಧರ್ಮಾಂಧರು ಆರ್‌ಆರ್‌ಆರ್ ಸಿನಿಮಾವನ್ನು ಬಾಯ್ಕಾಟ್ ಮಾಡಲು ಮತ್ತು ಚಿತ್ರ ಮಂದಿರಗಳನ್ನು ಕೆಡವಲು ಬಯಸಿದ್ದರು. ಈಗ ಅವರು ಎಲ್ಲಿ ಅಡಗಿದ್ದಾರೆ. ವಿಸ್ವಗುರುವಿನ ಶಿಷ್ಯರು ಆರ್‌ಆರ್‌ಆರ್ ಸಿನಿಮಾನ ಬ್ಯಾನ್ ಮಾಡಿ, ಚಿತ್ರ ಮಂದಿರಗಳನ್ನು ಕೆಡವ್ತೀವಿ ಅಂದಿದ್ರು. ಎಲ್ ಮಕ್ಕಾಡೆ ಮಲ್ಕೊಂಡವ್ರೆ ನೋಡ್ರಪಾ” ಎಂದು ವ್ಯಂಗ್ಯ ಮಾಡಿದ್ದಾರೆ.
ಇಂದು ಪ್ರಪಂಚದಾದ್ಯಂತ ಮನ್ನಣೆ ಗಳಿಸಿರುವ ಆರ್‌ಆರ್‌ಆರ್ ಸಿನಿಮಾ ಬಿಡುಗಡೆಗೊಂಡ ಸಮಯದಲ್ಲಿ ಕೆಲವು ಬಿಜೆಪಿ ನಾಯಕರಿಂದ ವಿರೋಧ ಎದುರಿಸಿತ್ತು. ಚಿತ್ರದಲ್ಲಿ ಕೋಮರಮ್ ಭೀಮನನ್ನು ಬಿಂಬಿಸಿದ ರೀತಿಗೆ ತೆಲಂಗಾಣದ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮುಸ್ಲಿಮರು ಧರಿಸುವ ಟೋಪಿಯನ್ನು ಭೀಮನ ಪಾತ್ರಧಾರಿ ಜೂನಿಯರ್ ಎನ್‌ಟಿಆರ್‌ಗೆ ತೊಡಿಸಿದ್ದಕ್ಕೆ ಆರ್‌ಆರ್‌ಆರ್ ವಿರುದ್ಧ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಜೊತೆಗೆ ಚಿತ್ರಕ್ಕೆ ಅಡ್ಡಿಪಡಿಸುವುದಾಗಿಯೂ ಹೇಳಿದ್ದರು.