ಬಿಜೆಪಿಗೆ ಮೇಯರ್ ಸ್ಥಾನ ಚಂದು ಪಾಟೀಲ್ ವಿಶ್ವಾಸ

ಕಲಬುರಗಿ.ಸೆ.24: ಕಾಂಗ್ರೆಸ್ಸಿಗರು ಆಲಿಬಾಬಾ ಮತ್ತು 40 ಕಳ್ಳರು ಎಂಬುದು ಇಡೀ ಉತ್ತರ ಕ್ಷೇತ್ರದ ಜನತೆಗೆ ಗೊತ್ತಾಗಿದೆ. ಹೀಗಾಗಿ ಈ ಬಾರಿ ಮತದಾರರ ಆಶಯದಂತೆ ಮಹಾನಗರ ಪಾಲಿಕೆಯ ಮೇಯರ್ ಸ್ಥಾನವು ಬಿಜೆಪಿಗೆ ಖಚಿತ ಎಂದು ಬಿಜೆಪಿ ಯುವ ಮುಖಂಡ ಹಾಗೂ ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್ ಅವರು ಹೇಳಿದರು.
ಶುಕ್ರವಾರ ಮಾಧ್ಯಮಗಳ ಮೂಲಕ ಮಾತನಾಡಿದ ಅವರು, ಈ ಬಾರಿಯ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮತದಾರರು ಬದಲಾವಣೆ ಬಯಸಿದ್ದಾರೆ. ಹಾಗಾಗಿ ಬಿಜೆಪಿಯು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಉತ್ತರ ಕ್ಷೇತ್ರದ ಶಾಸಕಿ ಮತ್ತು ಕಾಂಗ್ರೆಸ್ಸಿಗರು ಆಲಿಬಾಬಾ ಮತ್ತು 40 ಕಳ್ಳರು ಎಂದು ಟೀಕಿಸಿದ ಅವರು, ಶಾಸಕಿ ಶ್ರೀಮತಿ ಕನೀಜ್ ಫಾತಿಮಾ ಅವರು ಆಯ್ಕೆಯಾಗಿ ಮೂರುವರೆ ವರ್ಷಗಳು ಗತಿಸಿದರೂ ಸಹ ಉತ್ತರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಉತ್ತರ ಕ್ಷೇತ್ರದಲ್ಲಿ ಸರಿಯಾದ ರಸ್ತೆ, ಒಳಚರಂಡಿ, ಶುದ್ಧ ಕುಡಿಯುವ ನೀರಿಲ್ಲದೇ ಜನರು ಕನಿಷ್ಠ ಸೌಲಭ್ಯಗಳಿಂದ ವಂಚಿತಗೊಂಡಿದ್ದಾರೆ. ಹೀಗಾಗಿಯೇ ಮಹಾನಗರ ಪಾಲಿಕೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಈ ಬಾರಿ ಸುಮಾರು 13 ಜನ ಬಿಜೆಪಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಕಳೆದ ಬಾರಿ ಪಾಲಿಕೆಯ ಚುನಾವಣೆಯಲ್ಲಿ ಉತ್ತರ ಕ್ಷೇತ್ರದಲ್ಲಿ ಕೇವಲ ಒಂದು ಸ್ಥಾನ ಪಡೆದಿದ್ದ ಬಿಜೆಪಿ, ಈಗ ತನ್ನ ಸ್ಥಾನವನ್ನು 13ಕ್ಕೆ ಹೆಚ್ಚಿಸಿಕೊಂಡಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ಸಿನವರು ಹಾಗೂ ಶಾಸಕಿಯು ಆಯ್ಕೆಯಾದ ನಂತರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಬೆಂಗಳೂರಿನಲ್ಲಿಯೇ ಕಾಲಹರಣ ಮಾಡುತ್ತಾರೆ. ಚುನಾವಣೆ ಬಂದ ಸಮಯದಲ್ಲಿ ಒಂದೆರಡು ದಿನ ಮಾತ್ರ ಉತ್ತರ ಕ್ಷೇತ್ರದಲ್ಲಿ ಸಂಚರಿಸಿ ಬಿಜೆಪಿಯು ಹಿಂದುತ್ವವಾದವನ್ನು ಟೀಕಿಸಿ ಮತಗಳನ್ನು ಪಡೆಯುತ್ತಿದ್ದರು. ಅವರ ಈ ನಾಟಕ ಈಗ ಉತ್ತರ ಕ್ಷೇತ್ರದ ಜನತೆಗೆ ಗೊತ್ತಾಗಿದೆ. ಹಾಗಾಗಿ ಅಲ್ಲಿ ಬಿಜೆಪಿಯ ಅಭ್ಯರ್ಥಿಗಳನ್ನು ಹೆಚ್ಚಿನ ರೀತಿಯಲ್ಲಿ ಆಯ್ಕೆಗೊಳಿಸಿದ್ದಾರೆ. ಈ ಫಲಿತಾಂಶ ಮುಂಬರುವ ವಿಧಾನಸಭಾ ಚುನಾವಣೆಗೂ ದಿಕ್ಸೂಚಿಯಾಗಿದೆ ಎಂದು ಅವರು ತಿಳಿಸಿದರು.
ಇನ್ನು ಮಹಾನಗರ ಪಾಲಿಕೆಯ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ ಅವರ ಅಳಿಯ ಆದಿಲ್ ಸುಲೇಮಾನ್ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಕಟಪ ನಾಟಕವಾಡಿದ್ದು ಜನತೆಗೆ ಗೊತ್ತಿದೆ. ಆತನೇ ಆಲಿಬಾಬಾ ಮತ್ತು 40 ಕಳ್ಳರಲ್ಲಿ ಮೊದಲನೇಯವನು ಎಂದು ಅವರು ಟೀಕಿಸಿದರು.
ಕಾಂಗ್ರೆಸ್ಸಿಗರಿಗೆ ಹಾಗೂ ಚುನಾಯಿತ ಶಾಸಕರಿಗೆ ಉತ್ತರ ಕ್ಷೇತ್ರವು ಗೊತ್ತಾಗುವುದು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ. ಹೀಗಾಗಿ ಬಿಜೆಪಿಯ, ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಸಬ್ ಕೆ ಸಾತ್, ಸಬ್ ಕೆ ವಿಕಾಸ್ ಅಭಿವೃದ್ಧಿಗೆ ಮತದಾರರು ಮನಸೋತಿದ್ದಾರೆ. ಹಾಗಾಗಿ ಪಾಲಿಕೆಯ ಚುನಾವಣೆಯಲ್ಲಿ ಉತ್ತರ ಕ್ಷೇತ್ರದಲ್ಲಿ ಹಿಂದೂಗಳು, ಅಲ್ಪಸಂಖ್ಯಾತರೂ ಸಹ ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸಿರುವುದು ಫಲಿತಾಂಶವೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಮಹಾಮಾರಿ ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿಯೂ ಸಹ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ ಬೇಗಂ ಅವರು ಉತ್ತರ ಕ್ಷೇತ್ರಕ್ಕೆ ಬರಲಿಲ್ಲ. ಅಲ್ಲಿನ ಸಂಕಷ್ಟಿತರಿಗೆ ನೆರವಾಗಲಿಲ್ಲ. ಆದಾಗ್ಯೂ, ಆಗಿನ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ್ ಅವರು ಉತ್ತರ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹೋದರೆ ಕಾಂಗ್ರೆಸ್ಸಿಗರೇ ಇಲ್ಲದ ರಂಪಾಟ ಎಬ್ಬಿಸಿದರು. ಆದಾಗ್ಯೂ, ಬಿಜೆಪಿ ಸರ್ಕಾರವು ಕೋವಿಡ್ ಸಂಕಷ್ಟಿತರಿಗೆ ನೆರವಾಯಿತು ಎಂದು ಅವರು ತಿಳಿಸಿದರು.
ಈ ಬಾರಿ ಮೇಯರ್ ಸ್ಥಾನ ಬಿಜೆಪಿಗೆ ಸಿಗುವುದು ಖಚಿತ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ ಇಡೀ ನಗರವನ್ನು ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಆಡಳಿತವು ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.