ಬಿಜೆಪಿಗೆ ಮುಸ್ಲಿಮರ ಮತ ಬೇಡ

ಶಿವಮೊಗ್ಗ, ಏ.೨೫- ರಾಜ್ಯ ವಿಧಾನಸಭಾ ಸಾರ್ವಜನಿಕ ಚುನಾವಣೆಯಲ್ಲಿ ಬಿಜೆಪಿಗೆ ಮುಸ್ಲಿಮರ ಒಂದು ಮತವೂ ಅಗತ್ಯವಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ಸುಮಾರು ೬೦,೦೦೦ ಮಂದಿ ಮುಸ್ಲಿಮರಿದ್ದಾರೆ. ಅವರ ಮತಗಳು ನಮಗೆ ಬೇಡ. ಸಹಜವಾಗಿ ತಮಗೆ ಅಗತ್ಯವಿರುವಾಗ ನಮ್ಮ ಸಹಾಯವನ್ನು ಪ್ರತ್ಯೇಕವಾಗಿ ಸ್ವೀಕರಿಸಿರುವ ಮುಸ್ಲಿಮರು ಇದ್ದಾರೆ ಅವರು ನಮಗೆ ಮತ ಹಾಕುತ್ತಾರೆ. ರಾಷ್ಟ್ರೀಯವಾದಿ ಮುಸಲ್ಮಾನರು ಖಂಡಿತಾ ಬಿಜೆಪಿಗೆ ಮತ ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಬಿಜೆಪಿ ಆಡಳಿತದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರು. ಯಾರೂ ಹಿಂದೂಗಳ ಮೇಲೆ ದಾಳಿ ಮಾಡುವ ಧೈರ್ಯ ಮಾಡಲಿಲ್ಲ. ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದರೆ ಸಾರ್ವಜನಿಕರಲ್ಲಿ ಭದ್ರತೆ ಇಲ್ಲ ಎಂಬ ಭಾವನೆ ಇದೆ ಎಂದರು.ಈ ಹಿಂದೆಯೂ ೨೦೨೨ ರ ಜೂನ್‌ನಲ್ಲಿ ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಇದೇ ರೀತಿ ಮಾತನಾಡಿದ್ದರು, ಶಿವಮೊಗ್ಗ ನಗರದಲ್ಲಿ ಮುಸ್ಲಿಮರ ಮತ ಕೇಳಲು ಯಾವತ್ತೂ ಬೀದಿಗೆ ಹೋಗಿಲ್ಲ ಮತ್ತು ಮುಂದೆಯೂ ಹೋಗುವುದಿಲ್ಲ. ಬಹುತೇಕ ಕಡೆಗಳಲ್ಲಿ ಬಿಜೆಪಿ ಗೆಲ್ಲಲು ಮುಸ್ಲಿಂ ಮತಗಳ ಮೇಲೆ ಅವಲಂಬಿತವಾಗಿಲ್ಲ ಎಂದು ವಿವಾದಾತ್ಮಕ ಮಾತುಗಳನ್ನಾಡಿದ್ದರು.