ಬಿಜೆಪಿಗೆ ನೈತಿಕತೆ ಇದೆಯಾ: ಟಪಾಲ್:


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.16: ಈ  ತಿಂಗಳು 20 ರಂದು  ನಡೆಯುವ  ಬಿಜೆಪಿಯ ಎಸ್ಟಿ ಬೃಹತ್ ಸಮಾವೇಶದ ಸ್ಥಳ ಯಾರಿಗೆ ಸೇರಿದ್ದು. ಆ ಸ್ಥಳದಲ್ಲಿ ಸಮಾವೇಶ ನಡೆಸಲು ಬಿಜೆಪಿ ಪಕ್ಷಕ್ಕೆ ನೈತಿಕತೆ ಇದೆಯಾ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು.
ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗಾಗಲಿ, ರಾಜ್ಯದ ಅಧ್ಯಕ್ಷರಿಗಾಗಲಿ ನೈತಿಕತೆ ಇದೆಯೇ ಎಂದು ಪ್ರಶ್ನೆ ಮಾಡಿರುವ ಅವರು. ಒಂದು‌ ಕಡೆ  ಮಾಜಿ ಸಚಿವ, ಅಕ್ರಮ‌ ಗಣಿಗಾರಿಕೆಯ  ಆರೋಪಿ, ಗಾಲಿ ಜನಾರ್ಧನ ರೆಡ್ಡಿಅವರು ಬಿಜೆಪಿ ಪಕ್ಷ ನನ್ನನ್ನು ತುಳಿಯುವ ಕೆಲಸ ಮಾಡುತ್ತಿದೆ  ಎಂದು ಮಾಧ್ಯಮದಗಳಿಗೆ ಹೇಳುತ್ತಿದ್ದಾರೆ. ಇನ್ನೊಂದು ಕಡೆ ಬಿಜೆಪಿ ಪಕ್ಷದವರೇ ಅವರ ಫೋಟೋಗಳು ಪೋಸ್ಟರ್ ಗಳನ್ನು  ಹಾಕುತ್ತಿದ್ದಾರೆ.
ಜನಾರ್ಧನ ರೆಡ್ಡಿ ಅವರು 2008 ರಲ್ಲಿ ಸಚಿವರಾದ ನಂತರ ಅಕ್ರಮ ಗಣಿಗಾರಿಕೆ ಮಾಡಿದೆ ಎಂದು ಆಂದ್ರ ಸರ್ಕಾರದ ವರದಿ, ಸಿಈಸಿ ವರದಿ ,  ಮತ್ತು ಲೋಕಾಯಕ್ತ ವರದಿ ಹೇಳಿದೆ. ಎಲ್ಲಾ ವರದಿಗಳಲ್ಲಿ  ಕರ್ನಾಟಕದ ಗಣಿ ಸಂಪತ್ತನ್ನು  ಕೊಳ್ಳೆ ಹೊಡೆದಿದೆ ಎಂದು ಹೇಳಿದೆ. ಇದನ್ನು ನಾವು ಮೊದಲಿಂದಲೇ ಹೇಳಿದ್ದೇವೆ. ನಮ್ಮ ಆರೋಪಿಕ್ಕೆ ವರದಿಗಳು ಪುಷ್ಟಿ ತಂದಿವೆ.
ಅಂತಹ ಅಕ್ರಮ ಗಣಿಗಾರಿಕೆ ಯಿಂದ ಬಂದತಹ ಹಣದಿಂದಲೇ ಜನಾರ್ಧನರೆಡ್ಡಿ ಅವರು ಪಡೆದ ಸ್ಥಳದಲ್ಲಿ ನೀವು ಸಮಾವೇಶ ಮಾಡುತ್ತಿದ್ದೀರಿ.ಇದು
ಬಿಜೆಪಿಗೆ ನೈತಿಕತೆಯ ಪ್ರಶ್ನೆ ಅಲ್ಲವೇ. ನಾವು ಭ್ರಷ್ಟಚಾರ ನಿರ್ಮೂಲ ಮಾಡುತ್ತೇವೆ ಎಂದು ಹೇಳಿದ ನೀವು,  ಈಗ ಭ್ರಷ್ಟಚಾರ ಹಾಗೂ ಅಕ್ರಮ ಗಣಿಗಾರಿಕೆ ಯಿಂದ ಬಂದತಹ ಪ್ರದೇಶದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದಿದ್ದಾರೆ