ಬಿಜೆಪಿಗೆ ದೈನೇಸಿ ಸ್ಥಿತಿ:ಎಚ್‌ಡಿಕೆ ಗೇಲಿ

ಬೆಂಗಳೂರು, ಮಾ. ೧೩- ಮಂಡ್ಯಕ್ಕೆ ನಿನ್ನೆ ಬಂದಿದ್ದ ಪ್ರಧಾನಿ ಮೋದಿಯವರು ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಫೈಟರ್ ರವಿಗೆ ಕೈ ಮುಗಿದಿರುವುದು ಬಿಜೆಪಿಯ ದೈನೇಸಿ ಸ್ಥಿತಿಯನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಚನ್ನರಾಯಪಟ್ಟಣದ ತಾಲ್ಲೂಕಿನ ಹಿರಿಸಾವೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಮಂಡ್ಯ ಭೇಟಿಯಿಂದ ದಳಪತಿಗಳಲ್ಲಿ ತಳಮಳ ಎಂದೆಲ್ಲಾ ಬರೆದಿದ್ದಾರೆ. ಮೋದಿ ಬಂದಿದ್ದೂ ಗೊತ್ತಿಲ್ಲ, ಹೋಗಿದ್ದು ಗೊತ್ತಲ್ಲ. ಮೋದಿಯವರು ಇನ್ನು ೧೦ ಸಲ ಬಂದರೂ ನಮಗೆ ಚಿಂತೆ ಇಲ್ಲ. ಕೇವಲ ಮಂಡ್ಯ ಅಲ್ಲ, ಯಾವುದೇ ಭಾಗಕ್ಕೂ ಬಂದರೂ ಆ ಬಗ್ಗೆ ನಾವು ಚಿಂತೆ ಮಾಡಲ್ಲ ಎಂದರು.
ಮಂಡ್ಯದಲ್ಲಿ ಪ್ರಧಾನಿ ಮೋದಿಯವರು ಜೆಡಿಎಸ್ ಬಗ್ಗೆ ಮಾತನಾಡುವುದಕ್ಕೆ ಏನಿದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ, ನಾನು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯದ ಅಭಿವೃದ್ಧಿಗೆ ಹಲವಾರು ಯೋಜನೆ ಕೊಟ್ಟಿದ್ದೇವೆ. ಆ ಸತ್ಯ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಅವರು ಜೆಡಿಎಸ್ ಬಗ್ಗೆ ಮಾತನಾಡಿಲ್ಲ ಎಂದರು.
ಭ್ರಷ್ಟಾಚಾರ, ಕಾನೂನು ಬಾಹಿರ ಚಟುವಟಿಕೆಗೆ ನಾವು ಪ್ರೋತ್ಸಾಹ ಕೊಡದೇ ಇರುವುದರಿಂದ ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ವಿರುದ್ಧ ಮಾತನಾಡಲು ಸರಕಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಮೋದಿಯವರ ಭೇಟಿಯಿಂದ ನಮಗೆ ಯಾವ ತಳಮಳವಾಗಲೀ, ಭೀತಿಯಾಗಲೀ ಇಲ್ಲ. ಜನ ಮೋದಿಯವರ ತಾತ್ಕಾಲಿಕ ಮಾತಿನ ಖುಷಿಗಳಿಗೆ ಮರಳಾಗಲ್ಲ ಎಂದು ಕುಮಾರಸ್ವಾಮಿ ಹೇಳಿದರು.