ಬಿಜೆಪಿಗೆ ದೇಶದ ಅಭಿವೃದ್ಧಿ ಮುಖ್ಯವಲ್ಲ- ಬೇರೆ ಪಕ್ಷ ಮುಗಿಸುವುದೇ ಮುಖ್ಯ:ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ:ಸೆ.23: ಬಿಜೆಪಿಯವರಿಗೆ ದೇಶದ ಅಭಿವೃದ್ಧಿ ಮುಖ್ಯವಲ್ಲ, ಬೇರೆ ಪಕ್ಷ ದುರ್ಬಲಗೊಳಿಸುವುದೇ ಮುಖ್ಯವಾಗಿದೆ. ಗೋವಾದಲ್ಲಿ ಕಾಂಗ್ರೆಸ್​ಗೆ ಮುಗಿಸಬೇಕು ಎಂದು 8 ಜನರನ್ನು ತೆಗೆದುಕೊಂಡು ಆಡಳಿತ ಮಾಡುತ್ತಿದ್ದಾರೆ‌.‌ ಪ್ರಜಾಪ್ರಭುತ್ವ ಮುಗಿಸಬೇಕು ಅನ್ನೋ ದೃಷ್ಟಿಯಿಂದ ಹೀಗೆ ಮಾಡ್ತಿದ್ದಾರೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಖರ್ಗೆ, ಕೇಂದ್ರದ ನಡೆಯಿಂದ ಜನ ಬೇಸತ್ತಿದ್ದಾರೆ. ಡಾಲರ್ ಎದುರು ದಿನದಿನಕ್ಕೆ ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿದೆ. ಜಿಡಿಪಿ ಕೂಡಾ ಇಳಿಯುವ ಬಗ್ಗೆ ಆರ್ಥಿಕ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.
ಆದರೂ ದೇಶದ ಅಭಿವೃದ್ಧಿ ಬಗ್ಗೆ ಗಮನ ನೀಡುವ ಬದಲೂ ಬೇರೆ ಪಕ್ಷ ದುರ್ಬಲಗೊಳಿಸಲು ಮುಂದಾಗಿದೆ‌. ನನ್ನ 51 ವರ್ಷದ ರಾಜಕಾರಣದಲ್ಲಿ ಎಲ್ಲವನ್ನೂ ನೋಡಿದ್ದೇನೆ. ಆದರೀಗ ಜಲಸ್ಸಿ ಕಾರಣ, ಒಬ್ಬರನ್ನೊಬ್ಬರು ಮುಗಿಸುವಂತಹದ್ದು ನಡಿಯುತ್ತಿದೆ ಎಂದರು.
ಎನ್ಐಎ ದಾಳಿ ಉದ್ದೇಶ ಗೊತ್ತಾಗ್ತಿಲ್ಲ: ಯಾವ ಉದ್ದೇಶಕ್ಕಾಗಿ ಎನ್ಐಎ ದಾಳಿ ಮಾಡ್ತಾರೆ ಅಂತಾ ನಮಗೆನೂ ಹೇಳಿಲ್ಲ. ಮಾಧ್ಯಮದಲ್ಲಿ ಬಂದಿಲ್ಲ. ಯಾರು ದೇಶದ್ರೋಹಿ ಕೆಲಸ ಮಾಡ್ತಾರೆ, ಅವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರ ಇದೆ.‌ ಆದರೆ ಯಾವುದೇ ಸಂಸ್ಥೆ ಮೇಲೆ ಕ್ರಮ ತೆಗೆದುಕೊಳ್ಳುವಾಗ ಸಾಧಕ – ಬಾಧಕ ನೋಡಬೇಕು.
ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕೀಯವಾಗಿ ದಾಳಿಗಳು ನಡೆಯುತ್ತಿವೆ. ಸದ್ಯ ದೇಶದಲ್ಲಿ ಸರಿಯಾದ ವಾತಾವರಣ ಇಲ್ಲ ಎಂದು ಖರ್ಗೆ ಟೀಕಿಸಿದರು.
ನಾವು ದೇಶದ್ರೋಹಿ ಕೆಲಸ ಮಾಡುವವರಿಗೆ ರಕ್ಷಣೆ ಕೊಡುವವರಲ್ಲ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಕೊಡಿ, ಆದರೆ ಅನಾವಶ್ಯಕವಾಗಿ ಯಾರಿಗೂ ತೊಂದರೆ ಕೊಡಬೇಡಿ. ದೇಶದಲ್ಲಿ ಅಶಾಂತಿ ಉಂಟು ಮಾಡುವ ಬಗ್ಗೆ ನಾವು ಎಂದಿಗೂ ಸಹಿಸಿಲ್ಲ, ಸಹಿಸೋದಿಲ್ಲ ಎಂದು ಎಚ್ಚರಿಸಿದರು.
ರಾಹುಲ್ ಗಾಂಧಿ ಅಧ್ಯಕ್ಷರಾದರೆ ಲಾಭ ಹೆಚ್ಚು: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರ್ಯಾರು ಆಕಾಂಕ್ಷಿ ಇದ್ದಾರೆ ಅವರು ನಾಮಿನೇಷನ್ ಹಾಕ್ತಾರೆ. ನಾನಂತೂ ಆಕಾಂಕ್ಷಿ ಅಲ್ಲ. ಆದರೆ ಪಕ್ಷ ಕೊಡುವ ಕೆಲಸ ನಾನು ಮಾಡಬೇಕಾಗುತ್ತದೆ. ರಾಹುಲ್ ಗಾಂಧಿ ಅವರೇ ಅಧ್ಯಕ್ಷ ಆಗಬೇಕು ಅನ್ನೋದು ನನ್ನ ಅನಿಸಿಕೆ. ರಾಹುಲ್‌ ಗಾಂಧಿ ಅಧ್ಯಕ್ಷರಾದರೆ ಪಕ್ಷಕ್ಕೆ ಲಾಭ ಆಗುತ್ತೆ ಎಂದರು.
ರಾಹುಲ್ ಯುವಕರಿದ್ದಾರೆ, ಹೆಚ್ಚೆಚ್ಚು ಓಡಾಡಿ ಪಕ್ಷ ಸಂಘಟಿಸಬಹುದು. ಅವರ ಬಳಿ ಹೋರಾಟದ ಸಾಮರ್ಥ್ಯವಿದೆ. ಯುವ ಶಕ್ತಿ ಅವರೊಂದಿಗೆ ಇದೆ. ಹೀಗಾಗಿ ರಾಹುಲ್ ಗಾಂಧಿ ಮನವೊಲಿಸುವ ಕೆಲಸ ಮಾಡುತ್ತೇವೆ ನೋಡೊಣ ಏನಾಗುತ್ತೆ ಎಂದು ಖರ್ಗೆ ತಿಳಿಸಿದರು.
ಹೇಳಿದಷ್ಟು ಹಣ ಬಿಡುಗಡೆ ಮಾಡಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಸಿಎಂ ಬೊಮ್ಮಾಯಿ 5 ಸಾವಿರ ಕೋಟಿ ಕೊಡುವುದಾಗಿ ಹೇಳಿಕೆ ವಿಚಾರವಾಗಿ ಮಾತನಾಡಿದ ಖರ್ಗೆ ಅವರು, ಸಿಎಂ 5 ಸಾವಿರ ಕೋಟಿ ಕೊಡುತ್ತೇನೆ ಅಂತಾ ಹೇಳಿದ್ದಾರೆ. ಅದಕ್ಕೆ ನಾವು ಸ್ವಾಗತ ಮಾಡುತ್ತೇವೆ. ಹೇಳಿಕೆ ಕೊಟ್ಟು ಕಡಿಮೆ ಹಣ ಬಿಡುಗಡೆ ಮಾಡದೆ, ಹೇಳಿದಷ್ಟು ಹಣ ಕೊಡಬೇಕು ಎಂದರು.
ಜನ ಸಾಯುವಾಗ ಚೀತಾ ಅಗತ್ಯವಿತ್ತ?: ಕೋವಿಡ್ ನಿಂದ ದೇಶದಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ಅದೇಷ್ಟೋ ಜನ ಹಸಿವಿನಿಂದ ಈಗಲೂ ಸಾಯುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸೋ ಬದಲು ಚೀತಾ ತಂದಿದ್ದಾರೆ. ಚೀತಾ ತಂದ್ರು ಏನು ಪ್ರಯೋಜನ ಇಲ್ಲ. ತರದೆ ಇದ್ದರೂ ಏನೂ ಲಾಸ್ ಆಗ್ತಿರಲಿಲ್ಲ ಎಂದು ಪ್ರಧಾನಿ ಮೋದಿ ನಡೆಗೆ ಖರ್ಗೆ ಟೀಕೆ ವ್ಯಕ್ತಪಡಿಸಿದರು.