ಬಿಜೆಪಿಗೆ ಆನೆ ಬಲ ನೀಡಿದ ಉಪಚುನಾವಣೆ ಫಲಿತಾಂಶ

ತಿಪಟೂರು, ನ. ೧೪- ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ವಿಧಾನ ಪರಿಷತ್‌ನ ನಾಲ್ಕು ಕ್ಷೇತ್ರಗಳ ಫಲಿತಾಂಶ ಬಿಜೆಪಿಗೆ ಅದರಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೊಡ್ಡ ಮಟ್ಟದ ಶಕ್ತಿ ಹಾಗೂ ಆನೆ ಬಲ ಬಂದಂತಾಗಿದೆ.
ಎಲ್ಲಾ ವರ್ಗದವರು ಯಡಿಯೂರಪ್ಪ ಸರ್ಕಾರದ ೧೫ ತಿಂಗಳ ಸಾಧನೆ ಹಾಗೂ ಕಾರ್ಯಕ್ರಮ ಒಪ್ಪಿಕೊಂಡಿದ್ದಾರೆ ಎನ್ನುವುದನ್ನು ಸಾರುತ್ತದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರ ಕಳೆದ ೧೫ ತಿಂಗಳಲ್ಲಿ ಜನತೆಗೆ ಸ್ಪಂದಿಸಿದ ಕಾಳಜಿಗೆ ಉಪ ಚುನಾವಣೆ ಫಲಿತಾಂಶ ಗೆಲುವು ತಂದು ಕೊಟ್ಟಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಾಖ್ಯಾನ ಮಾಡಿದ್ದಾರೆ. ಈ ಫಲಿತಾಂಶ ಪ್ರತಿ ಪಕ್ಷಗಳ ಟೀಕೆ ಆರೋಪಕ್ಕೆ ಉತ್ತರವಾಗಿದೆಯೆಂದು ಕಲ್ಪತರು ಬ್ರಿಗೇಡ್ ಅಧ್ಯಕ್ಷ ಕೆ.ಎಸ್.ಸದಾಶೀವಯ್ಯ ಪ್ರತಿಪಾದಿಸಿದ್ದಾರೆ.
ಈಗ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದ್ದು, ನೀತಿ ಸಂಹಿತೆ ಮುಗಿದಿರುವುದರಿಂದ ಮತ್ತೆ ರಾಜ್ಯ ಸರ್ಕಾರ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕು. ಸಂಪನ್ಮೂಲ ಕ್ರೂಡೀಕರಣಕ್ಕೆ ಒತ್ತು ನೀಡಿ ಬಜೆಟ್ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಮುಂದಿನ ಎರಡೂವರೆ ವರ್ಷ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯವನ್ನು ಅಭಿವೃದ್ದಿ ಪಥದತ್ತ ಕೊಂಡಯ್ಯಲು ಮುಂದಾಗಬೇಕೆಂದು ಸದಾಶಿವಯ್ಯ ಆಗ್ರಹಿಸಿದ್ದಾರೆ.