
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.04: ಅನೇಕ ಕಡೆ ಸರ್ಕಾರಿ ಅತಿಥಿಗೃಹಗಳು ಬೇರೆ ಬೇರೆ ಉದ್ದೇಶಗಳಿಗೆ ಬಳಕೆ ಆಗುತ್ತವೆ. ಆದರೆ ಹುಬ್ಬಳ್ಳಿ ಅತಿಥಿ ಗೃಹ ಇದಕ್ಕೆ ಅಪವಾದವಾಗಿದೆ. ಅದರಂತೆ ಇಲ್ಲಿ ಸಹ ಪಾಲನೆ ಆಗಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.
ಅವರು ಇಂದು ನಗರದ ಹಳೇ ಸರ್ಕಾರಿ ಗೆಸ್ಟ್ ಹೌಸ್ ಹಿಂಭಾಗ ನೂತನವಾಗಿ 5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ವಿವಿಐಪಿ ಗೆಸ್ಟ್ ಹೌಸನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಬಳ್ಳಾರಿ ಜಿಲ್ಲೆಗೆ 124 ಕೋಟಿ ರೂ ರಸ್ತೆ ಅಭಿವೃದ್ಧಿಗೆ, 15 ಕೋಟಿ ರೂ ಕಟ್ಟಡ ನಿರ್ಮಾಣಕ್ಕೆ ನೀಡಿದೆ. 110 ಕೋಟಿ ರೂ ವೆಚ್ಚದಲ್ಲಿ ಜಿಲ್ಲಾ ನ್ಯಾಯಾಲಯ ನಿರ್ಮಿಸಿದೆ. ಪಕ್ಷ ಭೇದವಿಲ್ಲದೆ ಎಲ್ಲರಿಗೂ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಿರುವುದಾಗಿ ಹೇಳಿದರು.
ಟೀಕೆಗೆ ಹೆದರಬೇಡಿ:
ರಸ್ತೆಗಳನ್ನು ಅಭಿವೃದ್ಧಿ ಮಾಡಿದಾಗ ಅಧಿಕಾರಿಗಳು ಟೀಕೆಗೆ ಹೆದರಬೇಕಿಲ್ಲ. ಟೆಂಡರ್ ನಲ್ಲಿ ಇರುವಂತೆ ನಿರ್ಮಾಣ ಮಾಡಿ. ಆಗ ನೀವು ಸಂಘ ಸಂಸ್ಥೆ, ಆರ್ ಟಿ ಐ ಕಾರ್ಯಕರ್ತರಿಗೆ ಹೆದರಬೇಕಿಲ್ಲ. ಟೀಕೆ ಸಹಜ ಎಂದರು.
ಉತ್ತಮವಾಗಿದೆ:
ಬಳ್ಳಾರಿ ನಗರದಲ್ಲಿ ಅಭಿವೃದ್ಧಿ ಪಡಿಸಿರುವ ತಾಳೂರು ರಸ್ತೆ ಕಾಮಗಾರಿ ಗುಣಮಟ್ಟದ್ದಾಗಿದೆ. 10 ರಿಂದ 15 ವರ್ಷ ರಸ್ತೆ ಬಾಳಿಕೆ ಬರಬೇಕು ಎಂದರು.
ಮಳೆಗೆ ನಂಟು:
ಅದೇನೋ ಬಿಜೆಪಿಗೂ ಮಳೆಗೂ ಬಲು ನಂಟು, ನಾವು ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯದಲ್ಲಿ ಮಳೆ ಹೆಚ್ಚಾಗಿ ಬರುತ್ತದೆ. ಅತಿವೃಷ್ಟಿಯಾಗುತ್ತದೆ.
ಕಾಂಗ್ರೆಸ್ ಇದ್ಧಾಗ ಮಳೆ ಹೆಚ್ಚು ಬರಲ್ಲ ಎಂದು ಕುಟುಕಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿ, ಬ್ರಿಟಿಷರ ಆಡಳಿತಾವಧಿಯ ಗೆಸ್ಟ್ ಹೌಸ್ ಇತ್ತು. ಪಾರಂಪರಿಕ ವಾದ ಈ ಕಟ್ಟಡದಲ್ಲಿ ಬಹಳಷ್ಟು ಸಚಿವರು ಉಳಿದುಕೊಳ್ಳುತ್ತಿರಲಿಲ್ಲ. ಅದಕ್ಕಾಗಿ ಈ ನೂತನ ಗೆಸ್ಟ್ ಹೌಸ್ ನಿರ್ಮಾಣ ಮಾಡಿದೆ.
ಪಾರಂಪರಿಕವಾಗಿರುವ ಕಟ್ಟಡ ಹಾಗೇ ಇರಲಿ. ಅದರ ದುರಸ್ಥಿಗೆ ಹಣ ನೀಡಿ ಎಂದು ಕೇಳಿದರು. ತಕ್ಷಣ ವೇದಿಕೆಯಲ್ಲಿದ್ದ ಸಚಿವ ಸಿ.ಸಿ.ಪಾಟೀಲ್ ಅವರು ಐದು ಕೋಟಿ ರೂ ನೀಡುವುದಾಗಿ ಹೇಳಿದರು.
ಲೋಕೋಪಯೋಗಿ ಇಲಾಕೆಯಿಂದ ರಾಜ್ಯದಲ್ಲಿ ಎಕ್ಸ್ಪ್ರೆಸ್ ಹೈವೇಗಳು ಅಭಿವೃದ್ಧಿ ಆಗುತ್ತಿವೆ. 20-21 ನೇ ಸಾಲಿನಲ್ಲಿ 9810 ಕೋಟಿ ರೂ ಗಳಲ್ಲಿ ಶೇ 90 ರಷ್ಟು ಅನುದಾನ ವ್ಯಯಮಾಡಿ
4050 ಕಿಮೀ ರಾಜ್ಯ ಹೆದ್ದಾರಿ, 2338 ಕಿಮೀ ಜಿಲ್ಲಾ ಹೆದ್ದಾರಿ ಅಭಿವೃದ್ಧಿ ಮಾಡಿದೆ. ಬೆಂಗಳೂರು ಮೈಸೂರು ನಡುವಿನ 118 ಕಿಲೋ ಮೀಟರ್ ರಸ್ಥೆಯನ್ನು 3900 ಕೋಟಿ ರೂಗಳಿಂದ ಅಭಿವೃದ್ಧಿ ಮಾಡುತ್ತಿದೆ ಎಂದರು.
ಲೋಕೋಪಯೋಗಿ ಇಲಾಖೆಯಿಂದ ಸಚಿವರು ಜಿಲ್ಲೆಗೆ 176 ಕೋಟಿ ರೂ ನೀಡಿದ್ದಾರೆ. ಕಂಪ್ಲಿ ತುಂಗಭದ್ರ ಸೇತುವೆಗೆ 79 ಕೋಟಿ ರೂ ಬಿಡುಗಡೆ ಮಾಡಿದ್ದಾರೆ.
ಸಮಗ್ರ ಅಭಿವೃದ್ಧಿಗೆ ಪ್ರಯತ್ನ ನಡೆದಿದೆ. ಕೋವಿಡ್ ಸಂಕಷ್ಟದಲ್ಲೂ ನಮ್ಮ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿದೆಂದರು.
ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಮಾತಮಾಡಿ, ಕೋವಿಡ್ ನಿಂದ ಇದರ ಉದ್ಘಾಟನೆ ವಿಳಂಬ ಆಗಿತ್ತು ಎಂದ ಅವರು. ಸಚಿವ ಸಿಸಿ ಪಾಟೀಲರು ಅನುದಾನ ನೀಡಲು ಕೊಡುಗೈ ದಾನಿಗಳಿಂದ್ದಂತೆ. ತಾಳೂರು ರಸ್ತೆಗೆ ಮತ್ತೆ 9 ಕೋಟಿ ರೂ ಮಂಜೂರುಮಾಡಿದ್ದಾರೆ. ಅನಂತಪುರ ರಸ್ತೆ ಅಗಲೀಕರಣಕ್ಕೆ 18 ಕೋಟಿ ರೂ ನೀಡಿದ್ದಾರೆ.
ಎಸ್ಸಿಎಸ್ಟಿ ಮೀಸಲಾತಿಯಡಿ ಮತ್ತಷ್ಟು ಹೆಚ್ಚು ಅನುದಾನವನ್ನು ನೀಡಬೇಕೆಂದರು.
ಗೆಸ್ಟ್ ದುರ್ಬಳಕೆ ಮಾಡಿಕೊಳ್ಳಲ್ಲ ಎಂದು ಸಚಿವರಿಗೆ ಭರವಸೆ ನೀಡಿದ ಶಾಸಕರು, ಶ್ರೀರಾಮುಲು ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ನಗರದ ಅಭಿವೃದ್ಧಿಗೆ ವೇಗ ದೊರೆತಿದೆಂದರು.
ಸಂಡೂರು ಶಾಸಕ ಈ ತುಕರಾಂ ಅವರು ಮಾತನಾಡಿ. ಬುದ್ದ ಬಸವ ಅಂಬೇಡ್ಕರ್ ತತ್ವ ಅಳವಡಿಸಿಕೊಂಡಿರುವ ವ್ಯಕ್ತಿ, ಎಲ್ಲ ಪಕ್ಷದವರನ್ನು ಸಮಾನವಾಗಿ ಕಾಣುವಂತಹವರು. ಕಾಯಕ ತತ್ವದ ಪರಿಪಾಲಕರು ಸಿಸಿ ಪಾಟೀಲರಾಗಿದ್ದಾರೆ. ಗಣಿ ಬಾಧಿತ ಪ್ರದೇಶದ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡಿ ಎಂದು ಮನವಿ ಮಾಡಿ.
ನಾನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸಾಕಷ್ಟು ರಸ್ತೆಗಳು ಅಭಿವೃದ್ಧಿ ಮಾಡಿದ್ದರಿಂದ ಶಾಲೆಗಳಿಗೆ ಮಕ್ಕಳು ಬರುವುದು ಹೆಚ್ಚಿದೆ. ಆಸ್ಪತ್ರೆಗಳಿಗೆ ಆಂಬ್ಯಲೆನ್ಸ್ ಮುಟ್ಟುತ್ತಿವೆ. ರಾಷ್ಟ್ರೀಯ ಹೆದ್ದಾರಿ 63 ಕಾಮಗಾರಿ ಗ್ಯಾಮನ್ ಇಂಡಿಯಾ ಗುತ್ತಿಗೆದಾರರಿಂದ ನೆನೆಗುದಿಗೆ ಬಿದ್ದಿದೆ ಅದನ್ನು ಪೂರ್ಣಗೊಳಿಸಬೇಕು ಎಂದರು.
ಗ್ಯಾಮನ್ ಇಂಡಿಯಾ ಜೊತೆ ಒಂದುವಾರದಲ್ಲಿ ಸಭೆ ನಡೆಸಿ ರಾಷ್ಟ್ರೀಯ ಹೆದ್ದಾರಿ 63 ರ ಸಮಸ್ಯೆ ಬಗೆಹರಿಸಲಿದೆಂದು ಸಚಿವ ಪಾಟೀಲರು ವೇದಿಕೆಯಲ್ಲಿ ಭರವಸೆ ನೀಡಿದರು.
ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಮಾತನಾಡಿ. ಬಿಜೆಪಿಯವರಿಗೆ ಶೇ 50 ರಷ್ಟು ಹೆಚ್ಚಿಗೆ ಕೊಟ್ಟರೂ ಪ್ರತಿಪಕ್ಷದವರನ್ನು ಸಂತೃಪ್ತ ಪಡಿಸಿದ್ದಾರೆ ಸಿಸಿ ಪಾಟೀಲರು. ಬಳ್ಳಾರಿ ಸುತ್ತಮುತ್ತ ಇರುವ 18 ಕಿಲೋ ಮೀಟರ್ ರಿಂಗ್ ರೋಡ್ ಹಾಳಾಗಿದೆ ಅದನ್ನು ದುರಸ್ಥಿ ಮಾಡಲು ಅನುದಾನ ನೀಡಬೇಕು. ಚೇಳ್ಳಗುರ್ಕಿ ರಸ್ತೆ ಅಭಿವೃದ್ಧಿಗೆ ಕೆಕೆಆರ್ ಡಿಬಿಯಿಂದ ಈಗಾಗಲೇ ಐದುವರೆ ಕೋಟಿ ರೂ ಅನುದಾನ ದೊರೆತಿದೆ.ಜೊತೆಗೆ ಲೋಕೋಪಯೋಗಿ ಇಲಾಖೆ 7.8 ಕೋಟಿ ರೂ ನೀಡಿದೆ ಇನ್ನೂ ನಾಲ್ಕು ಕೋಟಿ ರೂ ನೀಡಿದರೆ ಮತ್ತಷ್ಟು ಅಭಿವೃದ್ಧಿಗೆ ಸಹಕಾರಿ ಆಗಲಿದೆ. ಮೋಕಾ ಬಳಿ ಗೆಸ್ಟ್ ಹೌಸ್ ಮಾಡಲು ಅನುದಾನ ನೀಡಬೇಕೆಂದು ಕೋರಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ರಾಜ್ಯ ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಬುಡಾ ಅಧ್ಯಕ್ಷ ಪಿ.ಪಾಲಣ್ಣ, ಮಾಜಿ ಸಂಸದೆ ಜೆ.ಶಾಂತಾ, ಪಾಲಿಕೆ ಸದಸ್ಯರಾದ ಮೋತ್ಕರ್ ಶ್ರೀನಿವಾಸ್, ಎಂ.ಗೋವಿಂದರಾಜುಲು, ಸುರೇಖ ಮಲ್ಲನಗೌಡ, ಪಿಡಬ್ಲುಡಿ ಇಲಾಖೆಯ ಹಿರಿಯ ಅಧಿಕಾರಿ ಜಗನ್ನಾಥ, ಎಸ್ಪಿ ಸೈದುಲ ಅಡಾವತ್, ಸಹಾಯಕ ಆಯುಕ್ತ ಆಕಾಶ್ ಶಂಕರ್, ಜಿಪಂ ಸಿಈಓ ಲಿಂಗಮೂರ್ತಿ ಇದ್ದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ವೆಂಕಟರಮಣ ಅತಿಥಿಗಳನ್ನು ಹೊಗಳಿಕೆಯಿಂದ ಸ್ವಾಗತಿಸುತ್ತ. ಶಾಸಕ ಸೋಮಶೇಖರ ರೆಡ್ಡಿ ಅವರನ್ನು ಓವರ್ ಆಕ್ಟಿವ್ ಎಂದು ಕರೆದಿದ್ದು. ಬರದೇ ಇದ್ದ ಮೇಯರ್ ನ್ನು ಸ್ವಾಗತಿಸಿದ್ದು ಗಮನ ಸೆಳೆಯಿತು. ಡಿ.ವಿನೋದ್ ಕಾರ್ಯಕ್ರಮ ನಿರೂಪಿಸಿದರು. ಡಿ.ಕಗ್ಗಲ್ಲು ದೊಡ್ಡಬಸವ ಗವಸಯಿಗಳ ತಂಡ ಪ್ರಾರ್ಥನೆ ಮತ್ತು ಸುಗಮ ಸಂಗೀತ ನಡೆಸಿಕೊಟ್ಟಿತು.