ಬಿಜೆಪಿಗೂ ಬಂಡಾಯದ ಬಿಸಿ

ಅತೃಪ್ತಿ ಶಮನಕ್ಕೆ ಸಿಎಂ ಯತ್ನ
ಬೆಂಗಳೂರು,ಏ.೧೨:ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಬಂಡಾಯದ ಹೊಗೆ ಎದ್ದಿದ್ದು, ಅತೃಪ್ತಿ-ಅಸಮಾಧಾನಗಳು ಸ್ಫೋಟಗೊಂಡಿವೆ. ಹಲವು ಕ್ಷೇತ್ರಗಳಲ್ಲಿ ಬಂಡಾಯವಾಗಿ ಕಣಕ್ಕಿಳಿಯಲು ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು ಮುಂದಾಗಿದ್ದು, ಬಂಡಾಯ ಶಮನಕ್ಕೆ ಬಿಜೆಪಿ ನಾಯಕರು ಹರಸಾಹಸ ನಡೆಸಿದ್ದಾರೆ.ಅಭ್ಯರ್ಥಿಗಳ ಪಟ್ಟಿ ಘೋಷಣೆ ಬೆನ್ನಲ್ಲೆ ಮಾಜಿ ಉಪಮುಖ್ಯಮಂತ್ರಿ ಬಿಜೆಪಿಯ ಲಕ್ಷ್ಮಣ ಸವದಿ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಟಿಕೆಟ್ ಸಿಗದಿದ್ದರೆ ಬಂಡಾಯ ಸ್ಪರ್ಧೆಗೆ ಅಣಿಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ.ಮಂಗಳೂರಿನ ಸುಳ್ಯಾ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿರುವ ಸಚಿವ ಎಸ್.ಎಸ್ ಅಂಗಾರ ರಾಜಕೀಯ ನಿವೃತ್ತಿ ಘೋಷಿಸಿ ಮಾಜಿ ಸಚಿವ ಈಶ್ವರಪ್ಪರವರ ಹಾದಿ ತುಳಿದಿದ್ದಾರೆ.ರಾಣೆಬೆನ್ನೂರು ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಸಹ ರಾಜೀನಾಮೆ ನೀಡುವುದಾಗಿ ಹೇಳಿದ್ದು, ಇವರು ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.ಬೈಲಹೊಂಗಲ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ವಿಶ್ವನಾಥ್ ಪಾಟೀಲ್ ಸಹ ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ. ಹೊಸದುರ್ಗದ ಹಾಲಿ ಶಾಸಕರಾಗಿದ್ದ ಗೂಳಿಹಟ್ಟಿ ಶೇಖರ್ ಟಿಕೆಟ್ ಕೈತಪ್ಪಿರುವುದಕ್ಕೆ ಅವರು ಬಂಡಾಯ ಎದ್ದಿದ್ದು, ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ. ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾಗಿದ್ದ ಅನಿಲ್ ಬೆನಕೆ, ರಾಮದುರ್ಗದ ಹಾಲಿ ಶಾಸಕ ಮಹದೇವಪ್ಪ ಯಾದವಾಡ ಸಹ ಟಿಕೆಟ್ ಕೈತಪ್ಪಿರುವುದಕ್ಕೆ ಅತೃಪ್ತಿ ಹೊರ ಹಾಕಿದ್ದು, ಬಂಡಾಯ ಸ್ಪರ್ಧೆಗೆ ಚಿಂತನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.ಬೆಳಗಾವಿ ಗ್ರಾಮೀಣ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಸಂಜಯ್ ಪಾಟೀಲ್ ಟಿಕೆಟ್ ಕೈತಪ್ಪಿರುವುದಕ್ಕೆ ಅಸಮಾಧಾನಗೊಂಡಿರುವುದು ಬೇರೆ ಪಕ್ಷ ಸೇರುವ ಸಾಧ್ಯತೆಗಳಿವೆ.ತುಮಕೂರು ನಗರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಸಹ ಟಿಕೆಟ್ ಕೈತಪ್ಪಿರುವುದಕ್ಕೆ ಅಸಮಾಧಾನಗೊಂಡಿದ್ದು, ಮುಂದಿನ ನಡೆಯ ಬಗ್ಗೆ ಬೆಂಬಲಿಗರ ಜತೆ ಚರ್ಚೆ ನಡೆಸಿದ್ದಾರೆ.ಟಿಕೆಟ್ ಕೈತಪ್ಪಿರುವ ಕೆಲ ಹಾಲಿ ಶಾಸಕರು ಹಾಗೂ ಟಿಕೆಟ್ ನಿರೀಕ್ಷೆಯಲ್ಲಿದ್ದ ಕೆಲವು ಆಕಾಂಕ್ಷಿಗಳು ಬಂಡಾಯ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ.ಬಿಜೆಪಿ ೧೮೯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ಹಾಲಿ ೯ ಶಾಸಕರಿಗೆ ಟಿಕೆಟ್ ನೀಡಿಲ್ಲ.ಬಿಜೆಪಿಯಲ್ಲಿ ಟಿಕೆಟ್ ಕೈತಪ್ಪಿರುವವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಗಾಳ ಹಾಕಿದ್ದು, ತಮ್ಮ ಪಕ್ಷಕ್ಕೆ ಬಂದರೆ ಟಿಕೆಟ್ ನೀಡುವ ಭರವಸೆಯನ್ನೂ ನೀಡಿದೆ. ಅತೃಪ್ತರ ಜತೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ನಾಯಕರುಗಳು ಮಾತುಕತೆ ಸಹ ನಡೆಸಿದ್ದಾರೆ.ಬಿಜೆಪಿಗೆ ರಾಜೀನಾಮೆ ಪ್ರಕಟಿಸಿರುವ ಲಕ್ಷ್ಮಣಸವದಿ, ಕಾಂಗ್ರೆಸ್ ಸೇರುವ ಸಾಧ್ಯತೆಗಳು ಹೆಚ್ಚಿದ್ದು, ಇವರು ಕಾಂಗ್ರೆಸ್ ಸೇರಿದಂತೆ ಅಥಣಿ ಟಿಕೆಟ್ ನೀಡುವ ಭರವಸೆಯನ್ನು ಕೈ ನಾಯಕರು ನೀಡಿದ್ದಾರೆ ಎನ್ನಲಾಗಿದೆ.ಹಿರಿಯರಿಗೆ ಟಿಕೆಟ್ ಇಲ್ಲ ಎಂಬ ಸೂತ್ರದಿಂದ ಟಿಕೆಟ್ ಕೈತಪ್ಪುವ ಭೀತಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವರಿಷ್ಠರ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಇಂದು ಭೇಟಿ ಮಾಡಿ ಚರ್ಚೆ ನಡೆಸುವರು. ಬಂಡಾಯವಾಗಿ ಸ್ಪರ್ಧಿಸುವುದಾಗಿ ಹೇಳಿರುವ ಜಗದೀಶ್ ಶೆಟ್ಟರ್ ವರಿಷ್ಠರ ಭೇಟಿಯ ನಂತರ ತಮ್ಮ ನಿಲುವನ್ನು ಬದಲಾಯಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಬಂಡಾಯ ಶಮನಕ್ಕೆ ಸೂತ್ರ
ಪಕ್ಷದಲ್ಲಿ ಕಾಣಿಸಿಕೊಂಡಿರುವ ಬಂಡಾಯ, ಅಸಮಾಧಾನ ಸರಿಪಡಿಸಲು ಬಿಜೆಪಿ ಮುಖಂಡರು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರೇ ಟಿಕೆಟ್ ಕೈತಪ್ಪಿರುವ ಹಾಲಿ ಶಾಸಕರು ಹಾಗೂ ಕೆಲ ಮುಖಂಡರುಗಳನ್ನು ಸಂಪರ್ಕಿಸಿ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ನಿಮಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ. ಬಂಡಾಯ ಸ್ಪರ್ಧೆ ಬೇಡ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ವರಿಷ್ಠರು ಎಲ್ಲ ಆಯಾಮವನ್ನು ಪರಿಗಣಿಸಿ ಟಿಕೆಟ್ ನೀಡಿದ್ದಾರೆ. ಟಿಕೆಟ್ ಕೈತಪ್ಪಿರುವುದಕ್ಕೆ ಬೇಸರ ಬೇಡ, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂಬ ಭರವಸೆಯನ್ನು ಬೊಮ್ಮಾಯಿ ಅವರು ನೀಡಿ ಟಿಕೆಟ್ ಕೈತಪ್ಪಿರುವವರ ಮನವೊಲಿಸುವ ಕೆಲಸವನ್ನು ಮಾಡಿದ್ದಾರೆ. ಹಾಗೆಯೇ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಹಲವು ಮುಖಂಡರ ಜತೆ ಮಾತನಾಡಿ ಅವರ ಮುನಿಸನ್ನು ಶಮನ ಮಾಡುವ ಪ್ರಯತ್ನ ನಡೆಸಿದ್ದಾರೆ.

ಅತೃಪ್ತಿ ಶಮನ ಸಿಎಂ ವಿಶ್ವಾಸ
ಟಿಕೆಟ್ ಕೈತಪ್ಪಿರುವ ಹಾಲಿ ಶಾಸಕರ ಜತೆ ಈಗಾಗಲೇ ಹಲವಾರು ಬಾರಿ ಮಾತನಾಡಿ ಎಲ್ಲವನ್ನೂ ಅವರ ಗಮನಕ್ಕೆ ತಂದು ಮುಂದೆ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದೇವೆ. ಹಾಗಾಗಿ, ಬಂಡಾಯ, ಅತೃಪ್ತಿ ಶಮನವಾಗಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪಕ್ಷ ಹಾಗೂ ಶಿಸ್ತಿನ ಪಕ್ಷ, ಬಂಡಾಯ, ಅಸಾಮಾಧಾನವನ್ನು ನಿಭಾಯಿಸುವ ಶಕ್ತಿ ಪಕ್ಷಕ್ಕಿದೆ ಎಂದು ಅವರು ದೆಹಲಿಯಿಂದ ಹಿಂದಿರುಗಿದ ನಂತರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.ಟಿಕೆಟ್ ಕೈತಪ್ಪಿರುವವರಿಗೆ ಅದಕ್ಕೆ ಕಾರಣ ಏನು, ಮುಂದೆ ಏನೆಲ್ಲ ಅವಕಾಶ ಸಿಗಲಿದೆ ಎಂಬುದನ್ನು ತಿಳಿಸಿದ್ದೇವೆ. ಹಾಗಾಗಿ, ಪಕ್ಷದ ಹಿರಿಯ ಶಾಸಕರು ಪಕ್ಷ ಬೆಳೆಸಿದ್ದಾರೆ, ಪಕ್ಷ ಅವರನ್ನು ಬೆಳೆಸಿದೆ. ಅವರಿಗೂ ಪಕ್ಷಕ್ಕೂ ಅನ್ಯೋನ್ಯ ಸಂಬಂಧವಿರುವುದರಿಂದ ಯಾವುದೇ ತೊಂದರೆಯಾಗಲ್ಲ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಸಮಾಧಾನಗೊಂಡಿರುವುದು ಊಹಾ-ಪೋಹ, ಯಡಿಯೂರಪ್ಪರವರು ೩ ದಿವಸ ದೆಹಲಿಯಲ್ಲಿದ್ದು, ಎಲ್ಲ ಸಭೆಗಳಲ್ಲೂ ಭಾಗಿಯಾಗಿ, ಆಯ್ಕೆ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ಪಕ್ಷದ ಅಧ್ಯಕ್ಷರನ್ನೂ ಭೇಟಿ ಮಾಡಿ ಮಾತನಾಡಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಮುಂದಿನ ಗೆಲುವಿನ ದಿಕ್ಸೂಚಿಯಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಗೆ ಹೋಲಿಸಿದರೆ ತಮ್ಮ ಅಭ್ಯರ್ಥಿಗಳು ಉತ್ತಮವಾಗಿದ್ದಾರೆ. ಈ ೧೮೯ ಅಭ್ಯರ್ಥಿಗಳ ಪಟ್ಟಿಯಲ್ಲೇ ನಾವು ಬಹುಮತ ಪಡೆಯುತ್ತೇವೆ ಎಂದರು.
ಉಳಿದ ೩೫ ಕ್ಷೇತ್ರಗಳಿಗೆ ಇನ್ನೆರೆಡು ಮೂರು ದಿನಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಾಗಿ ಅವರು ಹೇಳಿದರು.