ಕಲಬುರಗಿ,ಅ.1: ಹರಳಯ್ಯ ತಮ್ಮ ತೊಡೆಯ ಚರ್ಮದಿಂದ ಮಾಡಲ್ಪಟ್ಟು ಬಸವೇಶ್ವರರಿಗೆ ಅರ್ಪಣೆ ಮಾಡಿದ ಪಾದರಕ್ಷೆಗಳಿರುವ ಸೇಡಂ ತಾಲೂಕಿನ ಸುಕ್ಷೇತ್ರ ಬಿಜನಳ್ಳಿ, ಶರಣರ ಇತಿಹಾಸ ಪಠ್ಯಕ್ಕೆ ಸೇರ್ಪಡೆಯಾಗಬೇಕು, ಶರಣರ ಸ್ಥಳಗಳನ್ನು ಅಭಿವೃದ್ಧಿಗೊಳಿಸಬೇಕು. ಇಂತಹ ಸ್ಥಳಗಳ ಬಗ್ಗೆ ವ್ಯಾಪಕವಾಗಿ ಪ್ರಚುರಗೊಳಿಸುವ ಕಾರ್ಯವಾಗಬೇಕಾದದ್ದು ಅವಶ್ಯಕವಾಗಿದೆ ಎಂದು ಸಂಶೋಧಕ ಸಾಹಿತಿ ಮುಡಬಿ ಗುಂಡೇರಾವ ಹೇಳಿದರು.
ಸೇಡಂ ತಾಲೂಕಿನ ಸುಕ್ಷೇತ್ರ ಬಿಜನಳ್ಳಿಯ ಹರಳಯ್ಯ ದಂಪತಿಯ ಪಾದುಕೆಗಳ ದೇವಸ್ಥಾನಕ್ಕೆ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸುಕ್ಷೇತ್ರ ಭೇಟಿ, ಸ್ವಚ್ಛತಾ ಶ್ರಮಾದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಐತಿಹಾಸಿಕ ಸ್ಥಳಗಳ ಬೇಟಿ ನೀಡುವುದು ಅಗತ್ಯವಾಗಿದೆ. ಸ್ವಚ್ಛತೆ ಎಂಬುದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಅದು ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಿರಬೇಕು. ಸ್ವಚ್ಛತೆ ಕಾಪಾಡುವುದುರಿಂದ ಅನೇಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ. ಸ್ವಚ್ಛತೆ, ಆರೋಗ್ಯಯುತ ಪರಿಸರ ನಿರ್ಮಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಂ.ಬಿ.ನಿಂಗಪ್ಪ, ಬಸಯ್ಯಸ್ವಾಮಿ ಹೊದಲೂರ, ಶಿವಯೋಗಪ್ಪ ಬಿರಾದಾರ,ಅಸ್ಲಾಂ ಶೇಖ್, ಅಮರನಾಥ ಶಿವಮೂರ್ತಿ,ದೇವೇಂದ್ರಪ್ಪ ಗಣಮುಖಿ, ನಬಿಸಾಬ್ ಮಕನದಾರ್, ಸಿದ್ದಣ್ಣ ಯಕಮಾಯಿ, ಬಸವರಾಜ ಸೊಲಬಣ್ಣನವರ್, ಸೂರ್ಯಕಾಂತ ಬಂಡಿ, ಅಂಬರೀಷ್ ಯಗ್ಗಾ, ಸಿದು ಮಾಲಿಪಾಟೀಲ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.