ಬಿಗ್‌ಬಾಸ್‌ಗೆ ಬಂದರೆ ರಾಗಾ ಪ್ರಧಾನಿ ಆಗ್ತಾರಂತೆ

ಮುಂಬೈ,ಜು.೧೨-ವಿವಾದಗಳಿಂದಲೇ ಬಾಲಿವುಡ್‌ನಲ್ಲಿ ಸದ್ದು ಮಾಡಿರುವ ನಟಿ ರಾಖಿ ಸಾವಂತ್ ಈಗ ಮತ್ತೊಂದು ವಿಚಾರದ ಮೂಲಕ ಸುದ್ದಿಯಾಗಿದ್ದಾರೆ. ಪ್ರತಿ ಬಾರಿಯೂ ತಮ್ಮ ವೈಯಕ್ತಿಕ ಅಥವಾ ಸಿನಿಮಾ ಕುರಿತಾದ ವಿಚಾರಗಳಿಗೆ ಸುದ್ದಿಯಾಗುತ್ತಿದ್ದ ನಟಿ ರಾಖಿ, ಈಗ ರಾಜಕೀಯ ವಿಚಾರವಾಗಿ ಪ್ರಸ್ತಾಪಿಸಿ ವಿವಾದಕ್ಕೆ ಗುರಿಯಾಗಿದ್ದಾರೆ.

ವಿವಾದಿತ ನಟಿ ರಾಖಿ ಸಾವಂತ್ ಈ ಬಾರಿ ರಾಜಕಾರಣಿಯ ಭವಿಷ್ಯದ ಕುರಿತು ಮಾತನಾಡಿದ್ದಾರೆ. ವಿಶೇಷವೆಂದರೆ ರಾಹುಲ್ ಗಾಂಧಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ನಟಿ ರಾಖಿ ಅವರು ಈ ದೇಶದ ಪ್ರಧಾನಿ ಆಗಬೇಕು ಎಂದು ಬಯಸಿದ್ದಾರೆ.

ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ ರಾಹುಲ್ ಗಾಂಧಿಗೆ ಹೊಸ ಐಡಿಯಾವೊಂದನ್ನು ನೀಡಿದ್ದಾರೆ. ಅದೆನೆಂದರೆ ರಾಹುಲ್ ಗಾಂಧಿ ಹೆಚ್ಚಿನ ಪಾಪ್ಯುಲರ್ ಪಡೆಯಬೇಕೆಂದರೆ ಅವರು ಬಿಗ್ ಬಾಸ್ ಮನೆಗೆ ಹೋಗಬೇಕಂತೆ ಬಿಗ್ ಬಾಸ್ ಮನೆಗೆ ಹೋದರೆ ಹೆಚ್ಚಿನ ಜನಪ್ರಿಯತೆ ಸಿಗುತ್ತದೆ. ಇದು ರಾಹುಲ್ ಗಾಂಧಿ ಭವಿಷ್ಯದಲ್ಲಿ ಪ್ರಧಾನಿ ಆಗಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ ರಾಹುಲ್ ಪ್ರಧಾನಿ ಆಗಬೇಕು ಎನ್ನುವುದು ಕೇವಲ ಕಾಂಗ್ರೆಸ್ಸಿಗರ ಕನಸು ಮಾತ್ರವಲ್ಲ ನನ್ನ ಕನಸು ಕೂಡ ಹೌದು. ಹೀಗಾಗಿ ರಾಹುಲ್ ಗಾಂಧಿ ಬಿಗ್ ಬಾಸ್ ಮನೆಗೆ ಹೋದರೆ ಪ್ರಧಾನಿ ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಸದ್ಯ ರಾಖಿ ಸಾವಂತ್ ಪೋಸ್ಟ್ ನೋಡಿ ನೆಟ್ಟಿಗರು ಬಗೆ ಬಗೆಯ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದು, ರಾಖಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.