ಬಿಕ್ಷಾಟನೆಯನ್ನು ಅಪರಾಧೀಕರಣ ಎಂದು ಬಿಂಬಿಸತ್ತಿರುವುದು ಖಂಡನೀಯ

ರಾಯಚೂರು,ಅ.೩- ಬಿಕ್ಷಾಟನೆಯನ್ನು ಅಪರಾಧೀಕರಣ ಎಂದು ಬಿಂಬಿಸಲು ಹೊರಟಿರುವ ಸಮಾಜಕಲ್ಯಾಣ ಇಲಾಖೆ ಕ್ರಮ ಖಂಡನೀಯ ಎಂದು ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್ ಪರವಾಗಿ ಸಂಗಮ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕಿ ನಿಶಾ ಗೂಳೂರು ಆರೋಪಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರ ಜೀವಿಸುವ ಹಕ್ಕಿನ ಮೇಲೆ ಸಮಾಜ ಕಲ್ಯಾಣ ಇಲಾಖೆ ದಾಳಿ ನಡೆಸುತ್ತಿದೆ. ಸಮಾಜದ ತಿರಸ್ಕಾರ ಮತ್ತು ಉದ್ಯೋಗದ ಅವಕಾಶದ ಕೊರತೆಯಿಂದಾಗಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಬಸ್ತಿ(ಬಿಕ್ಷಾಟನೆ) ಹಾಗೂ ಲೈಂಗಿಕ ವೃತ್ತಿ ಅವಲಂಬಿಸಿ ಬದುಕುತ್ತಿದ್ದು ಅವುಗಳೆರಡನ್ನು ಕಸಿಯುವ ಮೂಲಕ ಸಮಾಜಕಲ್ಯಾಣ ಇಲಾಖೆ ನಮ್ಮನ್ನು ಅಸಹಾಯಕರನ್ನಾಗಿ ಮಾಡುತ್ತಿದೆ. ಬಿಕ್ಷಾಟನೆ ಕಾನೂನು ಪ್ರಕಾರ ಅಪರಾಧವಲ್ಲ.
ಹದಿನೈದು ದಿನಗಳ ಕೆಳಗೆ ದೇವದುರ್ಗ ಬೆಗ್ಗರ್ಸ್ ಕಾಲೋನಿಯ ಅಧಿಕಾರಿಗಳು ಲೈಂಗಿಕ ಅಲ್ಪಸಂಖ್ಯಾತರನ್ನು ಬಂಧಿಸಿ ಬಸ್ತಿ ಹಾಗೂ ಲೈಂಗಿಕ ವೃತ್ತಿ ಮಾಡಬಾರದೆಂದು ಆದೇಶಿಸಿರುವುದರಿಂದ ನಮಗೆ ದಾರಿ ದೋಚದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ನಮ್ಮ ಸಮೂದಾಯದ ಏಳಿಗೆಗಾಗಿ ಸರಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿಲ್ಲದಿರುವುದರಿಂದ ನಮ್ಮ ಸಮುದಾಯದ ಒಂದು ಅಭಿವೃದ್ಧಿ ಮಂಡಳಿ ರಚನೆ ಮಾಡಿ, ನಮಗೆ ಬದುಕುಕಟ್ಟಿಕೊಡುವುದಕ್ಕೆ ಅನುವು ಮಾಡಿಕೊಟ್ಟ ಮೇಲೆ ಈ ಕಾನೂನುಗಳನ್ನು ಜಾರಿಗೆ ತರುವುದು ಒಳಿತು ಎಂದರು.
ಸಮುದಾಯವನ್ನು ನೋಡುವ ದೃಷ್ಟಿಕೋನ ಬೇರೆಯದ್ದೇ ಇರುತ್ತದೆ. ಒತ್ತಾಯಪೂರ್ವಕವಾಗಿ ಹಣ ಕಿತ್ತುಕೊಂಡವರ ಮೇಲೆ ಸೂಕ್ತ ಕ್ರಮ ಜರುಗಿಸಿದರೆ ತಮ್ಮ ತಕರಾರು ಇಲ್ಲ. ಆದರೆ ಮೊದಲಿನಿಂದ ಮಾಡಿಕೊಂಡು ಬಂದಿರುವ ವೃತ್ತಿಯನ್ನೇ ಸಮಾಜಕಲ್ಯಾಣ ಇಲಾಖೆ ಕಿತ್ತುಕೊಂಡರೇ ನಮ್ಮ ಬದುಕು ಹೇಗೆ? ಎಂದು ಪ್ರಶ್ನಿಸಿದರು.
ದಲಿತ ಮುಖಂಡ ಎಂ.ಆರ್. ಭೇರಿ, ಕಾಗ್ರೂಸ್‌ನ ಮಾರೆಮ್ಮ, ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್ ಕಾರ್ಯದರ್ಶಿ ಪ್ರಗತಿ, ದೇವದುರ್ಗದ ರಂಗಮ್ಮ ಸೇರಿದಂತೆ ಇತರರು ಇದ್ದರು.