ಬಿಕ್ಕೆಗುಡ್ಡ ಕುಡಿಯುವ ನೀರು ಯೋಜನೆ: ಭೂಸ್ವಾಧೀನಕ್ಕೆ ಹೆಚ್ಚಿನ ಪರಿಹಾರ- ಜೆಸಿಎಂ

ತುಮಕೂರು, ಏ. ೩- ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿಕ್ಕೆಗುಡ್ಡ ಕುಡಿಯುವ ನೀರು ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳುವ ಜಮೀನಿಗೆ ಹಾಗೂ ಗಿಡ-ಮರ ಬೆಳೆಗಳಿಗೆ ಹೆಚ್ಚಿನ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಬಿಕ್ಕೆಗುಡ್ಡ ಕುಡಿಯುವ ನೀರಿನ ಯೋಜನೆ ಸಂಬಂಧ ಆ ಭಾಗದ ರೈತರೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರಂಭದಲ್ಲಿ ತೆರೆದ ಕಾಲುವೆ ಮೂಲಕ ನೀರು ಹರಿಸಲು ೧೫ ಮೀಟರ್ ಭೂ-ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ, ಈಗ ಪೈಪ್‌ಲೈನ್ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಹಿನ್ನೆಲೆಯಲ್ಲಿ ೬ ಮೀಟರ್ ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದರು.
ನೀರು ಹರಿಸುವ ಪೈಪ್‌ಲೈನ್ ಕಾಮಗಾರಿ ವೇಳೆ ಜಮೀನಿನಲ್ಲಿರುವ ಗಿಡ-ಮರ, ಬೆಳೆಗಳಿಗೆ ಹಾನಿಯುಂಟಾದರೆ ಮಾರ್ಗಸೂಚಿಯನ್ವಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ನಿಗದಿಪಡಿಸಿದ ದರದಲ್ಲಿ ಹೆಚ್ಚಿನ ಪರಿಹಾರ ಕೊಡಿಸಲಾಗುವುದು. ಭೂ-ಸ್ವಾಧೀನಕ್ಕೆ ರೈತರು ಸಮ್ಮತಿ ಸೂಚಿಸಿದರೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಇಲ್ಲದಿದ್ದರೆ ಸ್ವಾಧೀನ ಪ್ರಕ್ರಿಯೆಯಂತೆಯೇ ಪರಿಹಾರ ನೀಡಲಾಗುವುದು ಎಂದರು.
ಈ ಪ್ರದೇಶದಲ್ಲಿ ಅಡಿಕೆ, ತೆಂಗಿನ ತೋಟಗಳು ಸಮೃದ್ಧವಾಗಿವೆ. ನಾನು ಸ್ಥಳ ಪರಿಶೀಲನೆ ಮಾಡಿದ್ದೇನೆ. ಯೋಜನೆಯಿಂದ ಬಾಧಿತವಾಗುವ ಗಿಡ-ಮರ ಬೆಳೆಗಳಿಗೆ ಹೆಚ್ಚಿನ ಪರಿಹಾರ ಕಲ್ಪಿಸಲಾಗುವುದು ಅಲ್ಲದೇ ಪಪ್ಪಾಯಿ (ಪರಂಗಿ) ಮತ್ತು ಬಾಳೆ ಬೆಳೆಗಳಿಗೂ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಆ ಭಾಗದ ಜನರ ಅನುಕೂಲಕ್ಕಾಗಿ ಈ ಯೋಜನೆ ಕೈಗೊಳ್ಳಲಾಗಿದೆ. ಹಾಗಾಗಿ ರೈತರು ಇದಕ್ಕೆ ಸಮ್ಮತಿ ನೀಡಿ ಎಲ್ಲರೂ ಸಹಮತ ತೋರಬೇಕು ಎಂದು ಸಚಿವರು ಮನವಿ ಮಾಡಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ, ಬಿಕ್ಕೆಗುಡ್ಡ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು. ಪಪ್ಪಾಯಿ ಹಾಗೂ ಬಾಳೆ ಬೆಳೆಗಳಿಗೂ ಸೆಕ್ಷನ್ ೨ ರಂತೆ ದರ ನಿಗದಿ ಮಾಡಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದರು.
ಸಭೆಯಲ್ಲಿ ಶಾಸಕರಾದ ಶ್ರೀನಿವಾಸ್, ಜಯರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಂಶಿಕೃಷ್ಣ ಸೇರಿದಂತೆ ಯೋಜನೆಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.