ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣ

ಚಾಮರಾಜನಗರ, ಏ.07- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರ ಒಕ್ಕೂಟ ನೀಡಿದ್ದ ಕರೆಗೆ ಚಾಮರಾಜನಗರ ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳು ಬಸ್ ಸಂಚಾರ ಸ್ಥಗಿತಗೊಳಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅದರಂತೆ ನಿನ್ನೆ ಸಂಜೆಯಿಂದಲೇ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದ ನೌಕರರು ಇಂದು ಕೂಡ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು, ನೌಕರರು, ಕೂಲಿ ಕಾರ್ಮಿಕರು ಬೇರೆ ಬೇರೆ ಕಡೆ ಪ್ರಯಾಣಿಸುವವರು ತುಂಬಾ ತೊಂದರೆ ಅನುಭವಿಸುವಂತಾಗಿದೆ.
ಖಾಸಗಿ ಬಸ್‍ಗಳಿಗೆ ಬಂಪರ್: ಕೆಎಸ್‍ಆರ್‍ಟಿಸಿ ಬಸ್ ಸ್ಥಗಿತಗೊಂಡಿದ್ದರಿಂದ ಖಾಸಗಿ ಬಸ್‍ಗಳಿಗೆ ಲಕ್ ಕುದುರಿದೆ. ಈಗಾಗಲೇ ನಷ್ಟದಿಂದ ಕಂಗೆಟ್ಟುಹೋಗಿದ್ದ ಖಾಸಗಿ ಬಸ್‍ಗಳು ಇಂದು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದಲೇ ಸಂಚಾರ ಆರಂಭಿಸಿವೆ.
ನಿರ್ಧಿಷ್ಟ ಪ್ರಮಾಣದಲ್ಲಿದ್ದ ಖಾಸಗಿ ಬಸ್‍ಗಳು ಇಂದು ಯಥೇಚ್ಚವಾಗಿ ಕಂಡು ಬಂದಿರುತ್ತದೆ. ಪ್ರಯಾಣಿಕರು ಸಹ ಖಾಸಗಿ ಬಸ್‍ಗಳ ಸಂಚಾರವನ್ನು ಆಶ್ರಯಿಸುವಂತಾಗಿದೆ.
ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವು ಜನರಿಲ್ಲದೆ ಬಿಕೋ ಎನ್ನುತ್ತಿದೆ.