ಬಿಓಬಿ ಉದ್ಯೋಗಿಗಳಿಗೆ ಉಚಿತ ಕೌನ್ಸಿಲಿಂಗ್ ಸೇವೆ

ಮಂಗಳೂರು, ನ.೫- ಸರ್ಕಾರಿ ಸ್ವಾಮ್ಯದ ಅಗ್ರಗಣ್ಯ ಬ್ಯಾಂಕ್‌ಗಳಲ್ಲೊಂದಾದ ಬ್ಯಾಂಕ್ ಆಫ್ ಬರೋಡಾ, ತನ್ನ ಉದ್ಯೋಗಿಗಳ ಭಾವನಾತ್ಮಕ ಕಲ್ಯಾಣಕ್ಕಾಗಿ ಉದ್ಯೋಗಿ ನೆರವು ಯೋಜನೆಯನ್ನು ಆರಂಭಿಸಿದೆ.

ಉದ್ಯೋಗಿಗಳ ವೈಯಕ್ತಿಕ ಮತ್ತು ವೃತ್ತಿಸಂಬಂಧಿ ಸಮಸ್ಯೆಗಳಿಗೆ ಮನಃಶಾಸ್ತ್ರೀಯ ಸಲಹೆ ಮತ್ತು ಸಾಮಾನ್ಯ ಸಲಹೆ ಮೂಲಕ ನೆರವಾಗುವುದು ಇದರ ಉದ್ದೇಶ. ಉದ್ಯೋಗಸ್ಥಳದಲ್ಲಿ ಉದ್ಯೋಗಿಗಳಿಗೆ ಕೌನ್ಸಿಲಿಂಗ್ ನೆರವು ನೀಡುವ ಅಗತ್ಯತೆಯನ್ನು ಅರ್ಥ ಮಾಡಿಕೊಂಡಿರುವ ಬ್ಯಾಂಕ್, ಉದ್ಯೋಗಿಗಳ ಭಾವನಾತ್ಮಕ ಸುಕ್ಷೇಮಕ್ಕೆ ಒತ್ತು ನೀಡಿದೆ. ಮುಂಬೈ ವಲಯ ಕಚೇರಿ ಮತ್ತು ಕಾರ್ಪೊರೇಟ್ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ಈ ಉಪಕ್ರಮ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇದನ್ನು ಎಲ್ಲೆಡೆಗೆ ವಿಸ್ತರಿಸಿದೆ ಎಂದು ಬ್ಯಾಂಕಿನ ಎಂಡಿ & ಸಿಇಓ ಸಂಜೀವ್ ಛಡ್ಡಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಭಾವನಾತ್ಮಕ ಆಯಾಮ ಮತ್ತು ಒತ್ತಡವು ಉದ್ಯೋಗಿಗಳ ಆರೋಗ್ಯದ ಮೇಲೆ ಪ್ರಭಾವ ಬೀರುವುದರಿಂದ ಕೌನ್ಸಿಲಿಂಗ್‌ಗೆ ವಿಶೇಷ ಮಹತ್ವವಿದೆ. ಇದಕ್ಕಾಗಿ ಪರಿಣತ ಸೇವಾಪೂರೈಕೆದಾರರ ಜತೆ ಒಪ್ಪಂದ ಮಾಡಿಕೊಂಡಿದ್ದು, ಇದು ಸುರಕ್ಷಿತ ಮತ್ತು ಗೌಪ್ಯವಾಗಿರುತ್ತದೆ. ಉದ್ಯೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ದಿನದ ೨೪ ಗಂಟೆಯೂ ಈ ಸೇವೆ ಲಭ್ಯ ಎಂದು ವಿವರಿಸಿದ್ದಾರೆ.

ಇದು ಉದ್ಯೋಗಿಗಳ ಕೆಲಸದ ವಾತಾವರಣದ ಮೇಲೆ ಧನಾತ್ಮಕ ಪರಿಣಾಮ ಬೀರಿ ಉತ್ಪದಕತೆ ಹೆಚ್ಚಳಕ್ಕೆ ಕಾರಣವಾಗಲಿದೆ ಎಂಬ ವಿಶ್ವಾಸವನ್ನು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಲ್.ಜೈನ್ ಅಭಿಪ್ರಾಯಪಟ್ಟಿದ್ದಾರೆ.