ಬಿಐಎಎಲ್‌ಗೆ ಉಪನಗರ ರೈಲು ಸೇವೆ ಆರಂಭ

ಬೆಂಗಳೂರು, ಜ. ೪- ಬೆಂಗಳೂರು ನಗರದಿಂದ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕದ ಬೇಡಿಕೆ ಈಡೇರಿದ್ದು, ಇಂದಿನಿಂದ ಬೆಂಗಳೂರು ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ಡೆಮು ರೈಲು ಸೇವೆ ಆರಂಭಗೊಂಡಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಾಲ್ಟ್ ಸ್ಟೇಷನ್‌ಗೆ ನಗರದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಿಲ್ದಾಣದಿಂದ ಇಂದು ಬೆಳಗ್ಗೆ ೪.೪೫ ಕ್ಕೆ ಉಪನಗರ ರೈಲು ಸಂಚಾರ ಆರಂಭಿಸಿ ೫.೫೦ ಕ್ಕೆ ವಿಮಾನ ನಿಲ್ದಾಣದ ಹಾಲ್ಟ್‌ಸ್ಟೇಷನ್ ತಲುಪಿತು. ಈ ಮೂಲಕ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸೇವೆಗೆ ಅಧಿಕೃತ ಚಾಲನೆ ನೀಡಲಾಗಿದೆ.
ಈ ಕೆಂಪೇಗೌಡ ವಿಮಾನ ನಿಲ್ದಾಣದ ಹಾಲ್ಟ್ ಸ್ಟೇಷನ್‌ನಿಂದ ವಿಮಾನ ನಿಲ್ದಾಣಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರ ಉಚಿತವಾಗಿ ಶೆಟಲ್ ಬಸ್‌ಗಳ ವ್ಯವಸ್ಥೆಯನ್ನು ಪ್ರಯಾಣಿಕರಿಗಾಗಿ ಮಾಡಿದೆ.
ನಗರದ ಕ್ರಾಂತವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಮಾನ ನಿಲ್ದಾಣ ಹಾಲ್ಟ್‌ಸ್ಟೇಷನ್‌ಗೆ ೫೦ ರಿಂದ ೬೦ ನಿಮಿಷಗಳ ಪ್ರಯಾಣ ಇದಾಗಿದ್ದು, ಟಿಕೆಟ್ ದರ ೧೦ ರೂ. ನಿಗದಿ ಮಾಡಲಾಗಿದೆ. ಮಾರ್ಗ ಮಧ್ಯ ಡೆಮು ರೈಲು ೬ ಕಡೆ ನಿಲುಗಡೆಯಾಗಲಿದೆ.
ಸಂಸದ ಪಿ.ಸಿ. ಮೋಹನ್ ಪ್ರಯಾಣ
ಇಂದು ಬೆಳಗ್ಗೆ ಈ ಡೆಮು ರೈಲಿನಲ್ಲಿ ಸಂಸದ ಪಿ.ಸಿ. ಮೋಹನ್ ಮತ್ತು ಅಧಿಕಾರಿಗಳು ಹಾಗೂ ಮಾಧ್ಯಮಗಳವರು ಮೊದಲ ಭೋಗಿಯಲ್ಲೇ ಕುಳಿತು ವಿಮಾನ ನಿಲ್ದಾಣದ ಹಾಲ್ಟ್‌ಸ್ಟೇಷನ್ ತಲುಪಿದರು.
ವಿಮಾನ ನಿಲ್ದಾಣದ ಹಾಲ್ಟ್‌ಸ್ಟೇಷನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪಿ.ಸಿ. ಮೋಹನ್ ಅವರು, ೧೦ ರೂ.ಗಳಲ್ಲಿ ನಗರದ ಹೃದಯ ಭಾಗದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬಹುದಾಗಿದ್ದು, ಈ ಡೆಮು ರೈಲು ಸಂಚಾರದಿಂದ ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ. ಹಾಗೆಯೇ ಪ್ರಯಾಣಿಕರಿಗೂ ಸಮಯ ಉಳಿತಾಯವಾಗಲಿದೆ ಎಂದರು.
ಡೆಮು ರೈಲು ಸೇವೆಗೆ ಒಪ್ಪಿಗೆ ನೀಡಿದ ಕೇಂದ್ರದ ರೈಲ್ವೆ ಸಚಿವ ಪಿಯೋಶ್ ಗೋಯಲ್, ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲರಿಗೂ ಪಿ.ಸಿ. ಮೋಹನ್ ಧನ್ಯವಾದ ಹೇಳಿದರು.
ಈ ಡೆಮು ರೈಲು ಆರಂಭದ ಬಗ್ಗೆ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು, ಈ ರೈಲು ಸೇವೆಯಿಂದ ಪ್ರಯಾಣದ ವೆಚ್ಚ, ಸಮಯ, ಶ್ರಮ ಉಳಿಯಲಿದೆ. ನಗರದ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆಗಳನ್ನು ನೋಡಿಕೊಂಡು ನೇರ ತಡೆರಹಿತ ರೈಲುಗಳನ್ನು ಪರಿಚಯಿಸುವ ಚಿಂತನೆ ರೈಲ್ವೆ ಇಲಾಖೆ ಹೊಂದಿದ್ದು, ಆಗ ಪ್ರಯಾಣದ ಸಮಯ ಅರ್ಧಕರ್ಧ ಕಡಿಮೆಯಾಗಲಿದೆ.
ವಿಮಾನಗಳ ದಟ್ಟಣೆ ಅವಧಿಗೆ ಅನುಗುಣವಾಗಿ ಉಪನಗರ ರೈಲುಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ವಿಮಾನಗಳು ಹೆಚ್ಚು ಸಂಚರಿಸುವ ವೇಳೆ ಅಂದರೆ ಬೆಳಗಿನಜಾವ ಮತ್ತು ತಡ ರಾತ್ರಿ ಉಪನಗರ ರೈಲುಗಳ ಹೆಚ್ಚು ಸಂಚರಿಸಲಿವೆ.
ನಗರದ ಯಲಹಂಕ, ಕಂಟೋನ್‌ಮೆಂಟ್, ಬೈಯಪ್ಪನಹಳ್ಳಿ ಮತ್ತಿತರ ಕಡೆಗಳಿಂದಲೂ ವಿಮಾನ ನಿಲ್ದಾಣಕ್ಕೆ ಉಪನಗರ ರೈಲುಗಳು ಓಡಾಡಲಿವೆ.