ಬಿಎಸ್ ವೈ ಸರ್ವ ಸಮ್ಮತ ನಾಯಕ, ಸಿದ್ದುಗೆ ಕಟೀಲ್ ತಿರುಗೇಟು

ಮಂಗಳೂರು, ಮೇ 30- ಬಿಜೆಪಿಯಲ್ಲಿ ಸಮರ್ಥ ನಾಯಕರಿಲ್ಲ ಎಂಬ ವಿಷಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,ಬಿ.ಎಸ್.ಯಡಿಯೂರಪ್ಪ ಸರ್ವಸಮ್ಮತಿಯ ನಾಯಕ ಎಂದು ಹೇಳಿದ್ದಾರೆ.
ಪಕ್ಷದಲ್ಲಿ ನಾಯಕರ ಕೊರತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪನವರು ಪಕ್ಷಾಂತರ ಮಾಡಿ ಯಾರದ್ದೋ ಕಾಲು ಹಿಡಿದು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಕಾಂಗ್ರೆಸ್ ಗೆ ಸೇರುವ ಮುನ್ನ‌ ಅವರು ಎಲ್ಲಿದ್ದರು. ಅವರ‌ ಗುರು ಯಾರಾಗಿದ್ರು ಎಂಬುದು ಗೊತ್ತಿದೆ. ಕಾಂಗ್ರೆಸ್ ಪಕ್ಷದ ವಿರುದ್ದ ಟೀಕಾಪ್ರಹಾರ ನಡೆಸಿ ಮತ್ತೆ ಅದೇ ಪಕ್ಷಕ್ಕೆ ಸೇರ್ಪಡೆಯಾಗಿ ಮುಖ್ಯಮಂತ್ರಿಯಾಗಿದ್ದನ್ನು ಇಡೀ ಜಗತ್ತೆ ನೋಡಿದೆ ಎಂದು ಕಟಕಿಯಾಡಿದರು.
ಕಾಂಗ್ರೆಸ್ ಪಕ್ಚದಲ್ಲಿ ನಾಯಕತ್ವದ ಕೊರತೆ ಇದೆ ಎಂದು ಟೀಕಿಸಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದಾಗ ರಾಹುಲ್ ಗಾಂಧಿ ಅವರು‌ ಕುಮಾರಸ್ವಾಮಿ ಕೈಕಾಲು ಹಿಡಿದು ಮುಖ್ಯಮಂತ್ರಿ ಮಾಡಿದ್ದರು ಎಂದು ತರಾಟೆಗೆ ತೆಗೆದುಕೊಂಡರು.