ಬಿಎಸ್ ವೈ ರಾಜೀನಾಮೆ ಪ್ರಶ್ನೆ ಇಲ್ಲ: ಸಿದ್ದುಗೆ ಈಶ್ವರಪ್ಪ ತಿರುಗೇಟು

ಶಿವಮೊಗ್ಗ, ಏ. 3- ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಹಣ ಬಿಡುಗಡೆ ಮಾಡಿದ‌ ಬಗ್ಗೆ ರಾಜ್ಯಪಾಲರು ಮತ್ತು ಪಕ್ಷದ ವರಿಷ್ಠರಿಗೆ ದೂರು ನೀಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ತಿರುಗಿ ಬಿದ್ದಿದ್ದ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ರಾಗ ಬದಲಿಸಿದ್ದಾರೆ.
ಸಿಎಂರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ತಾವು ರಾಜ್ಯಪಾಲರಿಗೆ ಪತ್ರ ಬರೆದ ತಕ್ಷಣ ಬಿಎಸ್ ವೈ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಂಬ ಬಗ್ಗೆ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸವನಗೌಡ ಪಾಟೀಲ ಪ್ರಖರ‌ ಹಿಂದುತ್ವವಾದಿಯಾಗಿದ್ದು, ಸಾವಿರಾರು ಗೋವುಗಳನ್ನು ಸಾಕಿದ್ದಾರೆ. ಬಿ.ಎಸ್.ಯಡಿಯೂರಪ್ಪ ವಿಚಾರದಲ್ಲಿ ಏಕೆ ಹೀಗೆ ಮಾತನಾಡುತ್ತಿದ್ದಾರೊ ಗೊತ್ತಿಲ್ಲ. ಈ ಬಗ್ಗೆ ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.
ತಮ್ಮ ವಿರುದ್ಧ ಸಹಿ ಸಂಗ್ರಹ ಮಾಡಿದರೂ ಬಗ್ಗುವುದಿಲ್ಲ.ರಾಜೀನಾಮೆ ಖಾತೆಗಳಿಗೆ ಜಗ್ಗುವುದಿಲ್ಲ ಎಂದು ಅವರು ಪುನರುಚ್ಚರಿಸಿರಿದರು.
ಈ ಕುರಿತು ಸಾಕಷ್ಟು ಚರ್ಚೆಯಾಗಿದೆ, ತಮ್ಮ ನಿಲುವು ಸ್ಪಷ್ಟಪಡಿಸಿದ್ದೇನೆ. ಪಕ್ಷದ ವರಿಷ್ಠರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಗೊಂದಲಕ್ಕೆ ತೆರೆ ಎಳೆಯಲು ಸೂಚಿಸಿದ್ದಾರೆ. ಈ ಕುರಿತು ಬಹಿರಂಗವಾಗಿ ಯಾರೂ ಹೇಳಿಕೆ ನೀಡುವುದಿಲ್ಲ ಎಂದಿದ್ದಾರೆ. ಈಗ ಎಲ್ಲವೂ ಮುಗಿದುಹೋಗಿರುವ ಕಥೆ ಎಂದು ತಿಳಿಸಿದರು.