ಬಿಎಸ್ ವೈ ನಿವಾಸದ ಮೇಲೆ ಕಲ್ಲು ತೂರಾಟದ ಹಿಂದೆ ಕಾಂಗ್ರೆಸ್ ಕೈವಾಡ:ಸಿಎಂ

ಚಿಕ್ಕಬಳ್ಳಾಪುರ,ಮಾ.27-ಮಾಜಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಮೇಲೆ ನಡೆದ ಕಲ್ಲುತೂರಾಟ ಪ್ರಕರಣದ ಹಿಂದೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಕೈವಾಡವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾ. ಸದಾಶಿವ ಆಯೋಗದ ವರದಿಯಂತೆ ಮೀಸಲಾತಿ ಅನುಷ್ಠಾನ ಜಾರಿಮಾಡಿಲ್ಲ. ಸಂಪುಟದ ನಿರ್ಧಾರದಂತೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಅವರ ಕೃತ್ಯವನ್ನು ಖಂಡಿಸಿದ ಅವರು,
ರಾಜಕೀಯ ಲಾಭಕ್ಕಾಗಿ ಇಂತಹ ಕೃತ್ಯ ಮಾಡುತ್ತಿದ್ದಾರೆ. ಒಂದು ರಾಷ್ಟ್ರೀಯ ಪಕ್ಷ ಮಾಡುವಂತಹ ಕೆಲಸವಲ್ಲ. ಈ ಕೃತ್ಯ ಕ್ಷಮೆಗೆ ಅರ್ಹವಲ್ಲ. ಕಾಂಗ್ರೆಸ್ ಶಕುನಿ ಕೆಲಸ ಮಾಡುತ್ತಿರುವ ಬಗ್ಗೆ ಸುರ್ಜೆವಾಲ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.

ಘಟನೆ ನೋವು ತಂದಿದೆ:ಬಿಎಸ್ ವೈ

ಈ ಮಧ್ಯೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿಕಾರಿಪುರದ ತಮ್ಮ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿರುವುದು ತಮಗೆ ನೋವು ತಂದಿದೆ ಎಂದು ಹೇಳಿದರು.
ತಾಂಡಾ ಅಭಿವೃದ್ಧಿ ನಿಗಮವನ್ನು ನಾನೇ ಮಾಡಿದ್ದೇನೆ. ತಪ್ಪು ಗ್ರಹಿಕೆಯಿಂದ ಇಂತಹ ಘಟನೆ ನಡೆದಿರಬಹುದು ಎಂಬುದಾಗಿ ಭಾವಿಸಿದ್ದೇನೆ. ಬಂಜಾರ ಸಮುದಾಯದ ಹಿರಿಯರನ್ನು ಕರೆದು ಮಾತನಾಡುತ್ತೇನೆ. ನಾನು ಮತ್ತು ವಿಜಯೇಂದ್ರ ಇಬ್ಬರೂ ಬಂಜಾರ ಸಮುದಾಯದ ಸಮಸ್ಯೆಗಳ ಚರ್ಚೆಗೆ ಸಿದ್ಧರಿದ್ದೇವೆ. ಯಾವುದೇ ಕಾರಣಕ್ಕೂ ಸಮಾಜಘಾತುಕ ಶಕ್ತಿಗಳ ಮಾತು ಕೇಳಬೇಡಿ ಎಂದು ಅವರು ಮನವಿ ಮಾಡಿದರು.
ತಾವು ಯಾರನ್ನು ದೂರುವುದಿಲ್ಲ. ಶಿಕಾರಿಪುರಕ್ಕೆ ಭೇಟಿ ನೀಡಿ ಮಾಹಿತಿ ತಿಳಿದುಕೊಂಡ ಬಳಿಕ ಗೊತ್ತಾಗಲಿದೆ. ನನ್ನನ್ನು ಟಾರ್ಗೆಟ್​​ ಮಾಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಡಿಸಿ, ಎಸ್​​ಪಿ ಜೊತೆಗೆ ಕರೆ ಮಾಡಿ ಮಾತನಾಡಿದ್ದೇನೆ. ಯಾರನ್ನೂ ಬಂಧಿಸದಂತೆ ಕಠಿಣ ಕ್ರಮ ಕೈಗೊಳ್ಳದಂತೆಯೂ ಸೂಚಿಸಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದರು.