ಬಿಎಸ್ ಆರ್ ಕಾಂಗ್ರೆಸ್ ಪಕ್ಷದಿಂದ ಗೆದ್ದ ರಾಮುಲು


ಎನ್.ವೀರಭದ್ರಗೌಡ
ಬಳ್ಳಾರಿ, ಮಾ.18: ಗ್ರಾಮೀಣ ಕ್ಷೇತ್ರದ ಜನತೆ ಶ್ರೀರಾಮುಲು ಅವರಿಗೆ ಒಂದು ರೀತಿಯಲ್ಲಿ ಮನೆಯ ಮಂದಿಯಂತೆ ಇದ್ದರೂ, ಇಲ್ಲಿ ಸ್ಪರ್ಧೆ ಮಾಡಿದ್ದ ಎಲ್ಲಾ ಚುನಾವಣೆಯಲ್ಲಿ ಅವರಿಗೆ ಗೆಲುವು ತಂದು ಕೊಟ್ಟಿದ್ದರು. ಅದರಂತೆ 2013 ರ ಚುನಾವಣೆಯಲ್ಲೂ ತಾವು ಕಟ್ಟಿದ ಹೊಸ ಪಕ್ಷದಿಂದ  ರಾಮುಲು ಈ ಕ್ಷೇತ್ರದಿಂದ ಅನಾಯಾಸವಾಗಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧಿಸಿದರು.
ಮೊದಲ ಬಾರಿಗೆ  ಈ ಕ್ಷೇತ್ರದಲ್ಲಿ 2008 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ, ಎರಡನೇ ಬಾರಿಗೆ 2011 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ. ಶ್ರೀರಾಮುಲು 2013 ರ ಚುನಾವಣೆ ವೇಳೆಗೆ ಬಿಎಸ್ ಆರ್ ಕಾಂಗ್ರೆಸ್ ಪಕ್ಷ ಸ್ಥಾಪನೆ ಮಾಡಿ. ಬಸವ ಕಲ್ಯಾಣದಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಿ ರಾಜ್ಯದ 100 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಇವರದೇ ರೀತಿಯಲ್ಲಿ ಆಗ ಯಡಿಯೂರಪ್ಪ ಅವರು ಸಹ ಕೆಜೆಪಿ ಪಕ್ಷ ಕಟ್ಟಿದ್ದರು ಅವರು ಆರು ಸ್ಥಾನಗಳಲ್ಲಿ ಗೆದ್ದರೆ. ಶ್ರೀರಾಮುಲು ಪಕ್ಷ ನಾಲ್ಕು ಸ್ಥಾನಗಳಲ್ಲಿ ಗೆದ್ದಿತ್ತು. ಅದರಲ್ಲಿ ಬಳ್ಳಾರಿ ಗ್ರಾಮೀಣವೂ ಒಂದಾಗಿತ್ತು. ಉಳಿದಂತೆ ಮೊಳಕಾಲ್ಮುರು ಕ್ಷೇತ್ರದಿಂದ ನೇರ್ಲಗುಂಟೆ ತಿಪ್ಪೇಸ್ವಾಮಿ, ಕಂಪ್ಲಿಯಿಂದ ಅಳಿಯ ಸುರೇಶ್ ಬಾಬು, ಕುಡಚಿ ಕ್ಷೇತ್ರದಿಂದ ರಾಜೀವ್ ಅವರು ಆಯ್ಕೆಯಾಗಿದ್ದರು.
ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ಎರೆಡು ಬಾರಿ ಪ್ರತಿ ಸ್ಪರ್ಧಿಯಾಗಿದ್ದ ರಾಂ ಪ್ರಸಾದ್ ಅವರನ್ನು ಬದಲಿಸಿದ  ಕಾಂಗ್ರೆಸ್ ಈ ಬಾರಿ ಅಸುಂಡಿ ವನ್ನೂರಪ್ಪ ಅವರನ್ನು ಕಣಕ್ಕಿಳಿಸಿದರೂ, ಶ್ರೀರಾಮುಲು ಅವರನ್ನು ಮಣಿಸಲು ಅಗಲಿಲ್ಲ.
ತನ್ನ ವಿರುದ್ದ  ಕಾಂಗ್ರೆಸ್ ಮುಖಂಡರ  ಜೊತೆ ಒಳ ಸಂಚು ಮಾಡಿ, ವೀಕ್ ಕ್ಯಾಂಡಿಡೇಟ್ ಗಳನ್ನು ಹಾಕಿಸಿಕೊಂಡು ಬರುತ್ತಾರೆ ಎಂಬ ಆರೋಪದ  ಮಾತು ಕೇಳಿ ಬರುತ್ತಿತ್ತು.
ಈ ಚುನಾವಣೆಯಲ್ಲೂ ಚುನಾವಣಾ ತಂತ್ರದ  ಚಾಣಕ್ಯ ಎಂದು ಕರೆಸಿಕೊಳ್ಳುತ್ತಿದ್ದ ಜನಾರ್ಧನರೆಡ್ಡಿ ಇರಲಿಲ್ಲ. ಅವರಿನ್ನೂ ಅಕ್ರಮ ಗಣಿಗಾರಿಕೆ ಆರೋಪದಿಂದ ಜೈಲಿನಲ್ಲಿಯೇ ಇದ್ದರು. ಆದರೂ ಶ್ರೀರಾಮುಲು ತಾವೇ ರಾಜ್ಯಾದ್ಯಾಂತ ಸಂಚರಿಸಿ  ತಮ್ಮ ಅಭ್ಯರ್ಥಿಗಳ ಗೆಲುವಿಗೆ ನಡೆಸಿದ ಹೋರಾಟ ಮಧ್ಯೆಯೂ ಸ್ವಕ್ಷೇತ್ರ ಗ್ರಾಮೀಣದಲ್ಲಿ ಭರ್ಜರಿ ಜಯ ಸಾಧಿಸಿದ್ದರು, ತಮ್ಮ ಚಿನ್ಹೆ ಸೀಲಿಂಗ್ ಪ್ಯಾನ್  ತಿರುಗುವ ಬಿರುಸಿಗೆ  ಉಳಿದ ಅಭ್ಯರ್ಥಿಗಳು ತರಗೆಲೆಗಳಂತೆ ಸ್ಪರ್ಧಾ ಕಣದಿಂದ ಉದುರಿ ಬಿದ್ದಿದ್ದರು ಎನ್ನಬಹದು. ಈ ಬಾರಿ ಬಿಜೆಪಿ ಇಲ್ಲಿ ಠೇವಣೆ ಕಳೆದುಕೊಂಡಿತ್ತು.
ಶ್ರೀರಾಮುಲು ಅವರು 74, 854 ಮತ ಪಡೆದು 33,294 ಮತಗಳ  ಅಂತರದಿಂದ ಜಯ ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಅಸುಂಡಿ ವನ್ನೂರಪ್ಪ-41560,
ಜೆಡಿಎಸ್ ನ ಮೀನಳ್ಳಿ ತಾಯಣ್ಣ-3958, ಬಿಜೆಪಿಯ ಹುಲುಗಪ್ಪ-2478, ಕೆಜೆಪಿಯ ಪಾಂಡು ಬ್ಯಾಲಚಿಂತೆ-2347, ಎಸ್ ಯುಸಿಐನ ದೇವದಾಸ್-726, ಬಿಎಸ್ಪಿಯ ಮಾರೆಪ್ಪ-579, ಉಳಿದಂತೆ ಆರು ಜನ‌ ಪಕ್ಷೇತರರು ಕಣದಲ್ಲಿದ್ದರು.
ಈ ಚುನಾಚಣೆ ಬಳಿಕ 10  ವರ್ಷಗಳ ನಂತರ ಈ ಬಾರಿಯ 2023 ರ ಚುನಾವಣೆಯಲ್ಲಿ ಶ್ರೀರಾಮುಲು ಅವರು ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಈ ಹಿಂದೆ ಸ್ಪರ್ಧಿಸಿದಾಗ ಹೊಂದಾಣಿಕೆಯ ಅಭ್ಯರ್ಥಿಗಳನ್ನು ಸ್ಪರ್ಧಾಕಣಕ್ಕಿಳಿಸಿಕೊಂಡು ಜಯ ಸಾಧಿಸಬಹುದು ಎಂಬ ಸನ್ನಿವೇಶ ಈಗಿಲ್ಲ. ಕಳೆದ ಎರೆಡು ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ ಆಗಿರುವುದರಿಂದ ಈ ಬಾರಿ‌ ಗ್ರಾಮೀಣ ಕ್ಷೇತ್ರದ ಮತದಾರ ಶ್ರೀರಾಮುಲು ಅವರ ಕೈ ಹಿಡಿಯುತ್ತಾರಾ, ಇಲ್ಲಾ ಕಾಂಗ್ರೆಸ್ ನ “ಕೈ”ಗೆ ಮತ ಮುದ್ರೆ ಹಾಕಿ.  ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಕಳಿಸಿದ ಕ್ಷೇತ್ರದ ಜನತೆ ಕೈ ಕೊಡುವರಾ ಎಂಬುದನ್ನು ಕಾದು ನೋಡಬೇಕಿದೆ.