ಬಿಎಸ್‍ವೈ ಲಿಂಗಾಯಿತ ಪಂಚಮಸಾಲಿ ಋಣ ತೀರಿಸಲಿ: ಬಸವಜಯ ಮೃತ್ಯುಂಜಯ ಶ್ರೀ

ಧಾರವಾಡ, ಡಿ 26: ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೀಸಲಾತಿ ಸೌಲಭ್ಯ ಕಲ್ಪಿಸಿ ಲಿಂಗಾಯಿತ ಪಂಚಮಸಾಲಿ ಋಣ ತೀರಿಸಬೇಕು ಎಂದು ಕೂಡಲಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು ಆಗ್ರಹಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ ಸರ್ಕಾರ 2ಎ ಮೀಸಲಾತಿ ಕಲ್ಪಿಸಬೇಕು. ಸಮುದಾಯವು ಇನ್ನೂ ಹಿಂದುಳಿದ ಸಮುದಾಯವಾಗಿದ್ದು, ಸಮುದಾಯದ ಬಲವರ್ಧನೆಗೆ, ಬಡ ಲಿಂಗಾಯಿತರ ಶ್ರೇಯೋಭಿವೃದ್ಧಿಗೆ ಮೀಸಲಾತಿ ಅವಶ್ಯವಾಗಿದೆ ಎಂದರು.
ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಜನೆವರಿ 14 ರಂದು ಕೂಡಲಸಂಗಮದಿಂದ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ವಿಧಾನಸೌಧಕ್ಕೆ ಮುತ್ತಿಗೆಯನ್ನು ಹಾಕಿ ಹಕ್ಕೊತ್ತಾಯಕ್ಕೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.
ನಮ್ಮ ಸಮಾಜದ ಸಂಘಟನೆ ಆರಂಭವಾಗಿ 20 ವರ್ಷಗಳು ಗತಿಸಿತು. ಸಮಾಜದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಸಂಘಟನೆ ಆರಂಭವಾಗಿದೆ. ಅದಕ್ಕೆ ಬೇಕಾದ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ವೀರಪ್ಪ ಮೋಯ್ಲಿ ಅವರಿಂದ ಹಿಡಿದು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರವರೆಗೆ ಮನವಿ ಮಾಡಿಕೊಂಡಿದ್ದೇವೆ. ಇವರಿಗೆಲ್ಲ ಮನವಿ ಕೊಟ್ಟು ಸಾಕಾಗಿದೆ ಎಂದರು.
ಸ್ವಾತಂತ್ರ್ಯ ಬಂದಾಗಿನಿಂದ ಎಂಟು ಜನ ಲಿಂಗಾಯಿತ ಮುಖ್ಯಮಂತ್ರಿಗಳು ರಾಜ್ಯವನ್ನಾಳಿದ್ದಾರೆ. ಆದರೆ ರಾಜಕೀಯ ಜಾಗೃತಿಗೆ ಮಾತ್ರ ಲಿಂಗಾಯಿತ ಪಂಚಮಸಾಲಿ ಸಮುದಾಯ ಬಳಕೆಯಾಗಿದೆ ಎಂದರು. ಎಲ್ಲ ಎಂಟು ಮುಖ್ಯಮಂತ್ರಿಗಳಿಗೂ ಮೀಸಲಾತಿ ಕಲ್ಪಿಸುವಂತೆ ಅವಕಾಶವಿತ್ತು. ಆದರೆ ಯಾವ ಮುಖ್ಯಮಂತ್ರಿ ಕೂಡ ಸಮಾಜದ ಬೇಡಿಕೆಯನ್ನು ಈಡೇರಿಸಲಿಲ್ಲ. ಯಡಿಯೂರಪ್ಪ ಅವರು ಲಿಂಗಾಯಿತ ಪಂಚಮಸಾಲಿ ಸಮುದಾಯದ ಪ್ರಶ್ನಾತೀತ ನಾಯಕರಾಗಿ ಬಿಂಬಿಸಿಕೊಂಡಿದ್ದಾರೆ. ಅವರ ಮೇಲೆ ಲಿಂಗಾಯಿತ ಪಂಚಮಸಾಲಿ ಋಣಭಾರ ಬಹಳ ಇದೆ ಎಂದರು.
ಯಡಿಯೂರಪ್ಪ ಅವರ ಈ ಅಧಿಕಾರಾವಧಿಯಲ್ಲಿಯೇ ಮೀಸಲಾತಿ ಕಲ್ಪಿಸಬೇಕು. ಆರ್.ಎಸ್.ಎಸ್ ಸಹ ಇದನ್ನು ಮನವರಿಗೆ ಮಾಡಿಕೊಳ್ಳಬೇಕು. ಅಲ್ಲದೆ ಕರ್ನಾಟಕದಲ್ಲಿ ಬಿಜೆಪಿ ತಳವೂರಲು ಲಿಂಗಾಯಿತ ಸಮುದಾಯದ ಪಾತ್ರ ಬಹಳವಿದೆ. ಈ ಸತ್ಯ ಆರ್‍ಎಸ್‍ಎಸ್ ಗೂ ಗೊತ್ತಿದೆ ಎಂದರು.
ಮಹಾರಾಷ್ಟ್ರದಲ್ಲಿ ಸಂಘದ ಸಲಹೆ ಮೇರೆಗೆ ಮರಾಠರಿಗೆ ಶೇ. 16 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಅಲ್ಲಿನ ಸಂಘ ಪರಿವಾರದಂತೆ ಕರ್ನಾಟಕದ ಸಂಘ ಪರಿವಾರ ನಡೆದುಕೊಳ್ಳಬೇಕು. ಪಂಚಮಸಾಲಿ ಲಿಂಗಾಯಿತ ಸಮಾಜದ ಹಕ್ಕು ಈಡೇರಿಸಲು ಸಂಘ ಪರಿವಾರ ಸಲಹೆ ನೀಡಬೇಕು ಎಂದು ಬಸವಜಯ ಮೃತ್ಯುಂಜಯ ಶ್ರೀ ನುಡಿದರು.