ಬಿಎಸ್‌ವೈ ಸಂಪುಟದಲ್ಲಿ ಸಚಿವನಾಗಲಾರೆ ಯತ್ನಾಳ್ ಪ್ರತಿಜ್ಞೆ

ತುಮಕೂರು, ಮಾ. ೨೬- ಸಚಿವ ಸುಧಾಕರ್ ಅವರ ಏಕಪತ್ನಿ ವ್ರತಸ್ಥ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸಚಿವರು ಬುದ್ದಿಗೇಡಿಗಳ ರೀತಿ ಮಾತನಾಡಬಾರದು. ಮಹಿಳಾ ಶಾಸಕರೂ ಇದ್ದಾರೆ. ನಿಮ್ಮೆದೆಷ್ಟಿದೆಯೋ ಅಷ್ಟನ್ನು ಮಾತ್ರ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಹೇಳಿದ್ದಾರೆ.
ಮತ್ತೊಬ್ಬರ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಇವರಿಗೆ ೨೨೪ ಶಾಸಕರ ಬಗ್ಗೆ ಮಾತನಾಡುವ ಹಕ್ಕು ಕೊಟ್ಟವಱ್ಯಾರು, ೨೨೪ ಜನರೂ ಇವರಿಗೆ ಗುತ್ತಿಗೆ ಕೊಟ್ಟಿದ್ದೀವಾ ಎಂದು ಅವರು ಪ್ರಶ್ನಿಸಿದರು.
ನಗರದ ಸಿದ್ದಗಂಗಾ ಮಠಕ್ಕೆ ರಾತ್ರಿ ಭೇಟಿ ನೀಡಿ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಏಕಪತ್ನಿ ವ್ರತಸ್ಥ ವಿಚಾರದ ಬಗ್ಗೆ ಮಾತನಾಡಿರುವ ಸಚಿವ ಸುಧಾಕರ್‌ಗೆ ಸಾಕಷ್ಟು ಛೀಮಾರಿ ಆಗಿದೆ ಎಂದರು.
ನನ್ನ ವಿರುದ್ಧ ಮುಖ್ಯಮಂತ್ರಿಗಳಿಗೆ ಶಾಸಕರು ದೂರು ನೀಡಿದ್ದಾರೆ. ಆದರೆ ನನ್ನ ವಿರುದ್ಧದ ದೂರಿಗೆ ಯಾವೊಬ್ಬ ಶಾಸಕರೂ ಸಹಿ ಹಾಕಿಲ್ಲ. ಯಾರು ಸಹಿ ಹಾಕಿದ್ದಾರೆ ಎಂದು ಹೇಳಿದ್ದಾರೋ ಅವರೇ ಹಾಕಿಲ್ಲ. ಅವರ ಹೇಳಿಕೆಗಳು ಬದಲಾಗಿವೆ. ಯತ್ನಾಳ್ ವಿರುದ್ಧ ಬಹಿರಂಗ ಹೇಳಿಕೆ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಶಾಸಕರ ಸಹಿ ವಿಫಲವಾಗಿದೆ ಎಂದರು.
ಪ್ರತಿ ಕ್ಷೇತ್ರಕ್ಕೂ ೨೫ ಕೋಟಿ ರೂ. ಅನುದಾನ ಕೊಡಬೇಕು ಎಂದು ಶಾಸಕರುಗಳು ಸಹಿ ಮಾಡಿದ್ದಾರೆ. ಒಂದು ಪುಟದಿಂದ ಇನ್ನೊಂದು ಪುಟ ಇಟ್ಟು ಸಹಿ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಕರಾವಳಿ ಶಾಸಕರೆಲ್ಲಾ ಗಲಾಟೆ ಮಾಡಿದ್ದಾರೆ. ಯತ್ನಾಳ್ ವಿರುದ್ಧ ನಾವು ಸಹಿ ಮಾಡಿಲ್ಲ, ಅಭಿವೃದ್ಧಿಗೆ ಸಹಿ ಮಾಡಿದ್ದೀವಿ. ಮುಖ್ಯಮಂತ್ರಿಗಳು ಬೇಕಾದವರಿಗೆ ಅನುದಾನ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ ಎಂದರು.
ಕುಡಚಿ ಶಾಸಕರಿಗೆ ಒಂದು ಕೋಟಿ ಅನುದಾನ ಕೊಟ್ಟಿದ್ದರೆ ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಬಿಜೆಪಿಯ ೧೨೧ ಶಾಸಕರಲ್ಲಿ ಕೇವಲ ೪೧ ಶಾಸಕರಿಗೆ ಅನುದಾನ ಕೊಟ್ಟಿದ್ದಾರೆ ಎಂದ ಅವರು, ಮುಖ್ಯಮಂತ್ರಿಗಳು ತಮ್ಮ ಸಂಬಂಧಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮರಿಸ್ವಾಮಿ ಅವರಿಗೆ ೬೫ ಕೋಟಿ ಅನುದಾನ ನೀಡಿದ್ದಾರೆ. ಅವರಿಗೆ ೬೫ ಕೋಟಿ ನೀಡಿ, ಎಲ್ಲ ಬಿಜೆಪಿ ಶಾಸಕರಿಗೆ ೫ ಕೋಟಿ, ೧೦ ಕೋಟಿ ಮಾತ್ರ ಕೊಟ್ಟಿದ್ದಾರೆ. ಅನುದಾನ ಹಂಚಿಕೆಯಲ್ಲಿ ಈ ರೀತಿ ಅನ್ಯಾಯವಾಗಿದೆ. ಇದನ್ನು ಸಚಿವ ಈಶ್ವರಪ್ಪನವರು ತಡೆ ಹಿಡಿದಿದ್ದಾರೆ ಎಂದರು.
ಸಚಿವ ಈಶ್ವರಪ್ಪನವರನ್ನು ಕಟ್ಟಿ ಹಾಕಲು ಈ ರೀತಿ ಮಾಡಿದ್ದಾರೆ, ನನ್ನ ವಿರುದ್ಧ ಅಲ್ಲ ಎಂದ ಅವರು, ಯತ್ನಾಳ್ ವಿರುದ್ಧ ಸಹಿ ಸಂಗ್ರಹ ಮಾಡಿ ಯಾರಿಗೆ ಕೊಡ್ತಾರೆ.? ಈಗಾಗಲೇ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಅದಕ್ಕೆ ನಾನು ಉತ್ತರ ಸಹ ಕೊಟ್ಟಿದ್ದೀನಿ, ಇನ್ನೂ ಏನೂ ಕ್ರಮ ಆಗಿಲ್ಲ. ತಾಕತ್ ಇದ್ದರೆ ಆ ಸಹಿ ಪತ್ರವನ್ನು ತೋರಿಸಲಿ, ಯಾರು ಯಾರು ಸಹಿ ಮಾಡಿದ್ದಾರೆ ಎಂದು ಹೇಳಲಿ. ಕೊನೆ ಎರಡು ಸಾಲಿನಲ್ಲಿ ಯತ್ನಾಳ್ ಹೆಸರು ಬರೆದರೆ ಅದು ಶಾಸಕರಿಗೆ ಚೀಟಿಂಗ್ ಮಾಡಿದ ಹಾಗೆ ಎಂದರು.
ಸಚಿವನಾಗಲಾರೆ
ಯಾವುದೇ ಪರಿಸ್ಥಿತಿ ಎದುರಾದರೂ ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರದಲ್ಲಿ ನಾನು ಸಚಿವನಾಗುವುದಿಲ್ಲ. ಇದು ನನ್ನ ಭೀಷ್ಮ ಪ್ರತಿಜ್ಞೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನನ್ನನ್ನು ಉಪಮುಖ್ಯಮಂತ್ರಿ ಮಾಡುತ್ತೀನಿ, ಎರಡು- ಮೂರು ಇಲಾಖೆ ಕೊಡ್ತೀನಿ, ಇಂಧನ ಜಲಸಂಪನ್ಮೂಲ, ಗೃಹ, ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೂ ಕೊಡ್ತೀನಿ ಅಂದ್ರೂ ನಾನು ಮಂತ್ರಿಯಾಗಲ್ಲ ಎಂದು ಅವರು ಹೇಳಿದರು.