ಬಿಎಸ್‌ವೈ ವಿರುದ್ಧ ಮತ್ತೆ ಯತ್ನಾಳ್ ಗುಟುರು

ಮೈಸೂರು, ಜು. ೫- ರಾಜ್ಯದಲ್ಲಿ ಬಿಜೆಪಿ ಪಕ್ಷ ಉಳಿಯಬೇಕಾದರೆ ನಾಯಕತ್ವ ಬದಲಾಗಲೇಬೇಕು. ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಶೀಘ್ರ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ರವರು ಹೇಳಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಯಾರೂ ಬಹಿರಂಗ ಹೇಳಿಕೆ ನೀಡಬಾರದೆಂದು ಹೈಕಮಾಂಡ್ ಕಟ್ಟಾಜ್ಞೆ ವಿಧಿಸಿದ್ದರೂ ಸಚಿವರುಗಳು ಹಾಗೂ ಶಾಸಕರುಗಳು ಅದಕ್ಕೆಲ್ಲ ಕಿಮ್ಮತ್ತು ಕೊಡದೆ ನಾಯಕತ್ವ ಬದಲಾವಣೆ ಬಗ್ಗೆ ನಿತ್ಯವೂ ಮಾತನಾಡುತ್ತಿದ್ದು, ಸಚಿವ ಯೋಗೀಶ್ವರ್ ಮೈಸೂರಿನಲ್ಲಿ ನಾಯಕತ್ವ ಬದಲಾಗಲಿದೆ ಎಂಬ ದಾಟಿಯಲ್ಲಿ ಮಾತನಾಡಿದ ಬೆನ್ನಲ್ಲೆ ಇಂದು ಬಿಜೆಪಿ ಶಾಸಕ ಯತ್ನಾಳ್ ಮೈಸೂರಿನಲ್ಲೇ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಮೈಸೂರಿನ ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದ ನಂತರ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ದಿನಕ್ಕೆ ೧೦೦ ಕೋಟಿ ರೂ. ಲೂಟಿ ಹೊಡೆಯುತ್ತಿದ್ದಾರೆ. ವಿರೋಧ ಪಕ್ಷಗಳಿಗೂ ಈ ಭ್ರಷ್ಟಾಚಾರದಲ್ಲಿ ಪಾಲಿದೆ. ಹಾಗಾಗಿ ಅವಱ್ಯಾರೂ ಯಡಿಯೂರಪ್ಪನವರ ವಿರುದ್ಧ ಮಾತನಾಡುತ್ತಿಲ್ಲ. ಎಲ್ಲರಿಗೂ ಯಡಿಯೂರಪ್ಪ ಮುಂದುವರಿಕೆ ಬೇಕಿದೆ ಎಂದು ಟೀಕಿಸಿದರು.
ಭ್ರಷ್ಟಾಚಾರದಲ್ಲಿ ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರನ ಜೊತೆ ಪಾಲುದಾರರಾಗಿದ್ದಾರೆ. ಅವರಿಗೂ ಭ್ರಷ್ಟಾಚಾರ ದುಡ್ಡು ಹೋಗುತ್ತಿದೆ ಎಂದು ಆರೋಪಿಸಿದರು.
ದುಷ್ಟರ ಸಂಹಾರ ಆದಷ್ಟು ಬೇಗ ಆಗಬೇಕು. ದುಷ್ಟರ ಸಂಹಾರ ಮಾಡುವಂತೆ ತಾಯಿ ಚಾಮುಂಡೇಶ್ವರಿ ಬಳಿ ಬೇಡಿಕೊಂಡಿದ್ದೇನೆ. ರಾಜ್ಯವನ್ನು ಲೂಟಿ ಹೊಡೆಯುತ್ತಿರುವ ದುಷ್ಟರ ಸಂಹಾರ ಶೀಘ್ರ ಆಗುವ ವಿಶ್ವಾಸವೂ ಇದೆ ಎಂದರು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯ ಹಿಂಭಾಗದಲ್ಲಿರುವ ಅತಿಥಿಗೃಹ ವಿಜಯೇಂದ್ರ ಅವರ ಡೀಲ್ ಕೇಂದ್ರವಾಗಿದೆ. ಎಲ್ಲಾ ಡೀಲ್‌ಗಳು ಅಲ್ಲೇ ನಡೆಯುವುದು. ಸಿಸಿಬಿ ಪೊಲೀಸರು ಅಲ್ಲಿ ಮಾತ್ರ ದಾಳಿ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಆಗಸ್ಟ್ ೧೫ ಸ್ವಾತಂತ್ರ್ಯ ದಿನದ ಹೊತ್ತಿಗೆ ನೂತನ ಮುಖ್ಯಮಂತ್ರಿ ರಾಜ್ಯದಲ್ಲಿ ಧ್ವಜಾರೋಹಣ ನಡೆಸಲಿದ್ದಾರೆ ಎಂಬ ಚರ್ಚೆಗಳ ಬಗ್ಗೆಯೂ ಮಾತನಾಡಿದ ಯತ್ನಾಳ್, ಅಲ್ಲಿಯವರೆಗೂ ಏಕೆ ಕಾಯಬೇಕು. ಆದಷ್ಟು ಬೇಗ ಯಡಿಯೂರಪ್ಪ ಬದಲಾಗಬೇಕು ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಳಂಬವಾಗುತ್ತಿದೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರೊಂದಿಗೆ ಭೀಷ್ಮಚಾರ್ಯರು ದ್ರೋಣಚಾರ್ಯರಂತಹ ಒಳ್ಳೆಯವರು ಇದ್ದರು. ಆದರೂ ದುಷ್ಠಸಂಹಾರ ಆಗಲೇ ಬೇಕು. ಕೆಟ್ಟವರಿಗೆ ಕೊನೆಗಾಲ ಇದ್ದೇ ಇರುತ್ತದೆ. ಹೈಕಮಾಂಡ್ ಕೂಡ ಮುಖ್ಯಮಂತ್ರಿ ಬದಲಾವಣೆಗೆ ಪರಿಶೀಲನೆ ನಡೆಸಿದೆ ಎಂದರು.
ಮಠಾಧೀಶರ ವಿರುದ್ಧವೂ ವಾಗ್ದಾಳಿ
ಮುಖ್ಯಮಂತ್ರಿ ಯಡಿಯೂರಪ್ಪನವರ ಆಡಳಿತದಿಂದ ಲಿಂಗಾಯತ ಸಮುದಾಯಕ್ಕೆ ಕೆಟ್ಟ ಹೆಸರು ಬಂದಿದೆ. ಇಷ್ಟಾದರೂ ಮಠಾಧೀಶರು ಕೆಟ್ಟವರಿಗೆ ಬುದ್ಧಿ ಹೇಳುವ ಕೆಲಸ ಮಾಡುವುದನ್ನು ಬಿಟ್ಟು ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳುವುದು ಸರಿಯಲ್ಲ. ದಕ್ಷಿಣೆ ಕಾಸಿಗೆ ಆಸೆ ಬಿದ್ದು ಕೆಲ ಮಠಾಧೀಶರು ಮುಖ್ಯಮಂತ್ರಿ ಪರ ಮಾತನಾಡುತ್ತಿದ್ದಾರೆ ಎಂದು ಯತ್ನಾಳ್ ಕೆಲ ಸ್ವಾಮೀಜಿಗಳ ವಿರುದ್ಧವೂ ವಾಗ್ದಾಳಿ ನಡೆಸಿದರು.
ಮಠಾಧೀಶರು ಭ್ರಷ್ಟರ ಪರವಾಗಿ ಮಾತನಾಡಬಾರದು. ಮಠಾಧೀಶರಿಗೆ ಅಷ್ಟೊಂದು ರಾಜಕೀಯ ಹುಚ್ಚು ಇದ್ದರೆ ಖಾವಿ ತೆಗೆದು ಖಾದಿ ಧರಿಸಿ ಬರಲಿ ಎಂದು ಯತ್ನಾಳ್ ಹೇಳಿದರು.
ಸ್ವಾಮೀಜಿಗಳು, ಮಠಾಧೀಶರು ಲವ್ ಜಿಹಾದ್ ತಡೆಯಲು ಮುಂದಾಗಬೇಕು. ಅದು ಬಿಟ್ಟು ಭ್ರಷ್ಟರ ಪರ ನಿಲ್ಲಬಾರದು ಎಂದು ಅವರು ಹೇಳಿದರು.
ಯಡಿಯೂರಪ್ಪ ಅವರು ಎಲ್ಲಾ ಸಮುದಾಯಗಳ ನಾಯಕತ್ವ ಮುಗಿಸುತ್ತಿದ್ದಾರೆ. ಬಿಜೆಪಿಯಲ್ಲಿ ಲಿಂಗಾಯಿತ ಸಮುದಾಯದ ಯಾವೊಬ್ಬ ನಾಯಕನನ್ನು ಬೆಳೆಯಲು ಬೀಡುತ್ತಿಲ್ಲ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಅನ್ಯಾಯ ಆಗಿದೆ. ಅವರ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕುವ ಅವಕಾಶವಿದ್ದರೂ ಬಿಡುತ್ತಿಲ್ಲ. ಬ್ಲ್ಯಾಕ್‌ಮೇಲ್ ಮಾಡಲು ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ. ವಾಲ್ಮೀಕಿ ಸಮುದಾಯದ ನಾಯಕತ್ವ ಮುಗಿಸುವ ಹುನ್ನಾರವೂ ನಡೆದಿದೆ ಎಂದು ದೂರಿದರು.