ಬಿಎಸ್‌ವೈ ರಾಜೀನಾಮೆ ಮಾತು, ಯಾರು ಏನೇನಂದರು

ಬೆಂಗಳೂರು, ಜೂ.೬- ಹೈಕಮಾಂಡ್‌ನ ವಿಶ್ವಾಸವಿರುವವರೆಗೂ ಮುಖ್ಯಮಂತ್ರಿ ಹುದ್ದೆಯಲ್ಲಿರುತ್ತೇನೆ ಹೈ ಕಮಾಂಡ್ ಸೂಚಿಸಿದರೆ ಪದತ್ಯಾಗಕ್ಕೂ ಸಿದ್ಧ ಎಂಬ ಮುಖ್ಯಮಂತ್ರಿ ಯಡಿಯೂರಪ್ಪನವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಈ ಹೇಳಿಕೆಯ ಉದ್ದೇಶ ಅದರ ಹಿಂದಿರುವ ರಾಜಕೀಯ ತಂತ್ರಗಾರಿಕೆ ಎಲ್ಲದರ ಬಗ್ಗೆಯೂ ನಾನಾ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ನಾಯಕತ್ವ ಬದಲಾವಣೆಯ ಚಟುವಟಿಕೆಗಳು ಬಿಜೆಪಿಯಲ್ಲಿ ನಡೆದಿರುವಾಗಲೇ ಮುಖ್ಯಮಂತ್ರಿಗಳ ಈ ಹೇಳಿಕೆ ಅವರ ವಿರೋಧಿಗಳಿಗೆ ಬಿಸಿ ಮುಟ್ಟಿಸಿದೆ. ತಮ್ಮ ವಿರುದ್ಧ ನಿಂತಿರುವ ವಿರೋಧಿಗಳಿಗೆ ಹೈಕಮಾಂಡ್‌ನ ಅಭಯವಿರುವವರೆಗೂ ಯಾರು ಏನೂ ಮಾಡಲು ಆಗಲ್ಲ ಎಂಬ ಸ್ಪಷ್ಟ ಸಂದೇಶವನ್ನು ಯಡಿಯೂರಪ್ಪ ನೀಡಿರುವುದು ಸ್ಪಷ್ಟ.
ಹೈಕಮಾಂಡ್ ಜತೆ ಸಂಘರ್ಷ ಬೇಡ ಎಂಬ ಮನಃಸ್ಥಿತಿಯಲ್ಲಿರುವ ಯಡಿಯೂರಪ್ಪನವರು ವರಿಷ್ಠರು ಹೇಳಿದ ದಿನವೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಹೇಳುವ ಮೂಲಕ ಪಕ್ಷದೊಳಗಿನ ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿಗಳು ಈ ಹೇಳಿಕೆಯನ್ನು ಸಚಿವರುಗಳು, ವಿರೋಧಿ ನಾಯಕರುಗಳು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.
ಈ ಬಗ್ಗೆ ನಾಯಕರುಗಳ ಪ್ರತಿಕ್ರಿಯೆಗಳು ಈ ರೀತಿ ಇವೆ

 • ರಾಜ್ಯ ಬಿಜೆಪಿಯಲ್ಲಿ ಯಾವುದೇ ಅಪಸ್ವರ ಇಲ್ಲ. ಯಡಿಯೂರಪ್ಪನವರೇ ನಮ್ಮ ನಾಯಕರು. ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ.
 • ನಳಿನ್ ಕುಮಾರ್ ಕಟೀಲು. ಬಿಜೆಪಿ ರಾಜ್ಯಾಧ್ಯಕ್ಷ.
 • ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬದಲಿಸುವ ಪ್ರಶ್ನೆಯೇ ಇಲ್ಲ. ಹೈ ಕಮಾಂಡ್‌ನ ಮುಂದೆ ಆ ರೀತಿಯ ಯಾವುದೇ ಪ್ರಸ್ತಾಪ ಇಲ್ಲ. ಕೊರೊನಾ ಸಂಕಷ್ಟದಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾರೆ.
 • ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ.
 • ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕರು, ಅವರ ಬದಲಾವಣೆ ಪ್ರಶ್ನೆ ಹೈ ಕಮಾಂಡ್‌ನ ಮುಂದೆ ಇಲ್ಲ. ೪೫ ವರ್ಷ ಹೋರಾಡಿ ಪಕ್ಷ ಕಟ್ಟಿದ್ದಾರೆ.
 • ಉಪ ಮುಖ್ಯಮಂತ್ರಿ, ಗೋವಿಂದ ಕಾರಜೋಳ.
 • ಮುಖ್ಯಮಂತ್ರಿ ಯಡಿಯೂರಪ್ಪನವರ ಮಾತಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪಕ್ಷದ ನಿರ್ಣಯಕ್ಕೆ ಬದ್ಧ ಎಂದು ಅವರು ಹೇಳಿದ್ದಾರೆ. ಅವರೇ ನಮ್ಮ ನಾಯಕರು,
 • ಡಾ. ಸಿ.ಎನ್. ಅಶ್ವತ್ಥ ನಾರಾಯಣ. ಉಪಮುಖ್ಯಮಂತ್ರಿ
 • ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ವರಿಷ್ಠರು ಸೂಚಿಸಿದರೆ ರಾಜೀನಾಮೆ ನೀಡುತ್ತೇನೆ ಎಂದು ಯಾವ ಹಿನ್ನೆಲೆಯಲ್ಲಿ ಹೇಳಿ
  ದ್ದಾರೋ ಗೊತ್ತಿಲ್ಲ. ಯಡಿಯೂರಪ್ಪರವರನ್ನು ನಂಬಿ
  ಬಿಜೆಪಿಗೆ ಬಂದಿದ್ದೇವೆ.
 • ಡಾ. ಕೆ. ಸುಧಾಕರ್. ಆರೋಗ್ಯ ಸಚಿವ
 • ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆ ಸ್ವಾಗತಾರ್ಹ, ಪರ್ಯಾಯ ನಾಯಕರಿದ್ದಾರೆ ಎಂಬ ದೊಡ್ಡ ಮಾತುಗಳನ್ನು ಅವರು ಹೇಳಿದ್ದಾರೆ. ಬಿಎಸ್‌ವೈ ಬಹಳ ಕಷ್ಟಪಟ್ಟು ಪಕ್ಷ ಕಟ್ಟಿದ್ದಾರೆ.
 • ಹೆಚ್. ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ
 • ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ನಾನು ಮಾತನಾಡಿಲ್ಲ. ಅವರ ಬಗ್ಗೆ ಮಾತನಾಡಿದರೆ ಬೆಂಕಿ ಹೊತ್ತಿಕೊಳ್ಳುತ್ತೆ. ರಾಜೀನಾಮೆ ಬಗ್ಗೆ ಅವರು ನೀಡಿರುವ ಹೇಳಿಕೆ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ನಿರ್ವಹಣೆಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ, ಯಾರು ಬೇಕು ಬೇಡ ಎಂಬುದನ್ನು ವರಿಷ್ಢರು ತೀರ್ಮಾನಿಸುತ್ತಾರೆ.
 • ಸಚಿವ ಸಿ.ಪಿ.ಯೋಗೇಶ್ವರ್
 • ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಿನಿಂದಲೂ ಇದೇ ಮಾತು ಕೇಳಿ ಬರುತ್ತಿದೆ.ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಶಿಸ್ತು ಹೋಗಿದೆ. ಹಾಗೆಯೇ ಆಡಳಿತದಲ್ಲೂ ಹಿಡಿತ ತಪ್ಪಿದೆ.
  -ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
 • ಮುಖ್ಯಮಂತ್ರಿ ಬದಲಾದರೂ ಅಷ್ಟೇ, ಬದಲಾಗದಿದ್ದರೂ ಅಷ್ಟೇ ರಾಜ್ಯದ ಜನರ ಹಣೆಬರಹ ಬದಲಾಗಲ್ಲ, ವ್ಯಕ್ತಿ ಮುಖ್ಯವಲ್ಲ, ಪರ್ಯಾಯ ನಾಯಕತ್ವವನ್ನು ಜನ ಸೃಷ್ಟಿ ಮಾಡುತ್ತಾರೆ. ರಾಜೀನಾಮೆ ವಿಚಾರಗಳನ್ನು ಬಹಿರಂಗವಾಗಿ ಮಾತನಾಡಬಾರದು. ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು.
 • ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ