ಬಿಎಸ್‌ವೈ ರಾಜೀನಾಮೆಗೆ ಸಿದ್ದು ಒತ್ತಾಯ

ಬೆಂಗಳೂರು, ಮೇ ೩- ಚಾಮರಾಜನಗರದ ಆಸ್ಪತ್ರೆಯಲ್ಲಿ ಸಂಭವಿಸಿರುವ ದುರ್ಘಟನೆಗೆ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಪ್ರಕರಣದ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರ ಮೂಲಕ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಇದು ಅತ್ಯಂತ ಗಂಭೀರ ಹಾಗೂ ಅಮಾನವೀಯ ಘಟನೆ, ರಾಜ್ಯದಲ್ಲಿ ಆಡಳಿತಯಂತ್ರ ಕುಸಿದು ಬಿದ್ದಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಎಂದು ಅವರು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.
ಬಿಜೆಪಿಯವರ ಅಧಿಕಾರದ ಲಾಲಸೆಗೆ ಇನ್ನೆಷ್ಟು ಅಮಾಯಕ ಜನರು ಬಲಿಯಾಗಬೇಕು? ಜನರ ಜೀವ ರಕ್ಷಿಸಲಾಗದ ಇಂತಹ ಸರ್ಕಾರ ಇರುವುದಕ್ಕಿಂತ ತೊಲಗುವುದೇ ಲೇಸು ಎಂದು ಅವರು ಕಿಡಿಕಾರಿದ್ದಾರೆ.
ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಆಕ್ಸಿಜನ್ ಸಿಗದೆ ಉಂಟಾಗಿರುವ ಸರಣಿ ಸಾವುಗಳ ಮುಂದುವರೆದ ಭಾಗವಿದು. ಈ ಸಾವಿಗೆ ರಾಜ್ಯ ಸರ್ಕಾರ, ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಜಿಲ್ಲಾಡಳಿತವೇ ನೇರಹೊಣೆ ಎಂದು ಅವರು ದೂರಿದ್ದಾರೆ.
ಚಾಮರಾಜನಗರ ದುರ್ಘಟನೆಯಲ್ಲಿ ಮೃತಪಟ್ಟಿರುವವರ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದ್ದಾರೆ.