ಬಿಎಸ್‌ವೈ ಬದಲಾವಣೆ ಸಾಧ್ಯವಿಲ್ಲ- ಮುತಾಲಿಕ್

ಗದಗ, ಜು. ೩೦- ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆ ಸಾಧ್ಯವಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆ ಸಾಧ್ಯವಿಲ್ಲ. ಅವರು ಈ ಮಟ್ಟಕ್ಕೆ ಬೆಳೆಯಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ ಎಂದು ಹೇಳಿದರು.
ರಾಜ್ಯದ ಜನ ಕೊರೊನಾ ಆತಂಕ ಹಾಗೂ ಭಯದಲ್ಲಿದ್ದಾರೆ. ಇಂತಹ ವೇಳೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಸರಿಯಲ್ಲ ಎಂದರು.
ಬಿಜೆಪಿಯಪ್ಪಿ ರಾಜಕೀಯ ಸ್ಥಾನಮಾನ ಸಿಗದ ಬಗ್ಗೆ ಪ್ರತಿಕ್ರಿಯಿಸದ ಅವರು, ರಾಜಕೀಯ ಪ್ರವೇಶದ ಬಗ್ಗೆ ಹಿಂದೆಯೇ ಅಭಿಲಾಷೆ ವ್ಯಕ್ತಪಡಿಸಿದ್ದೆ. ಆದರೆ ಆಗಲಿಲ್ಲ. ರಾಜಕೀಯ ಅಧಿಕಾರದಿಂದ ಹಿಂದುತ್ವಕ್ಕೆ ಬಲ ತುಂಬುವುದು ನನ್ನ ಕಾರ್ಯಸೂಚಿಯಾಗಿತ್ತು. ನಮ್ಮಂತಹ ಪ್ರಾಮಾಣಿಕ ಹಿಂದೂವಾದಿ ಹೋರಾಟಗಾರರು ಬೇಡವಾಗಿದೆ ಎಂದು ಬೇಸರಿಸಿಕೊಂಡರು.
ಈಗ ರಾಜಕಾರಣ ಕುಲಗೆಟ್ಟು ಹೋಗಿದೆ. ಭ್ರಷ್ಟರು, ದುಷ್ಟರು, ಲೂಟಿಕೋರರೇ ತುಂಬಿದ್ದಾರೆ. ಹಾಗಾಗಿ ರಾಜಕಾರಣದಿಂದ ದೂರ ಉಳಿದಿದ್ದೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಚೀನಾ ದೇಶ ಭಾರತದ ಮೇಲೆ ಆಕ್ರಮಣ ಮಾಡಿದರೆ ಅದಕ್ಕೆ ತಕ್ಕಪಾಠ ಕಲಿಸಲಾಗುವುದು. ಈಗ ಇರುವುದು ಕಾಂಗ್ರೆಸ್ ಸರ್ಕಾರವಲ್ಲ, ಪ್ರಧಾನಿ ನರೇಂದ್ರಮೋದಿಯವರ ಸರ್ಕಾರ. ಚೀನಾಗೆ ಉತ್ತರ ಕೊಡುವ ತಾಕತ್ತು ನಮ್ಮ ದೇಶಕ್ಕಿದೆ ಎಂದರು.
ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ರಾಮಮಂದಿರಕ್ಕೆ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಿಂದ ಬೆಳ್ಳಿ ಲೇಪಿತ ಶಿಲೆಯನ್ನು ಕಳುಹಿಸಲಾಗುತ್ತಿದ್ದು, ಬೆಳ್ಳಿ ಲೇಪಿತ ಶಿಲೆ ಹಾಗೂ ಪವಿತ್ರ ಜಲವನ್ನು ತೆಗೆದುಕೊಂಡು ಪ್ರಮೋದ್ ಮುತಾಲಿಕ್ ಅವರು ಗದಗ ನಗರಕ್ಕೆ ಆಗಮಿಸಿ ಜೋಡ್ ಹನುಮಾನ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಅಂಜನಾದ್ರಿ ಬೆಟ್ಟ ಹನುಮಂತ ದೇವರು ಜನಿಸಿದ ಭೂಮಿ. ಹಾಗಾಗಿ ಹನುಮನ ಜನ್ಮ ಸ್ಥಳದಿಂದ ರಾಮಜನ್ಮ ಸ್ಥಳಕ್ಕೆ ಈ ಶಿಲೆ ಮತ್ತು ಜಲವನ್ನು ಕಳುಹಿಸಲಾಗುತ್ತಿದೆ.